ಬೆಂಗಳೂರು: ಫ್ರೀ ಸ್ಕೂಲ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಗು ಮಹಡಿಯಿಂದ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ.
ಸಿಲಿಕಾನ್ ಸಿಟಿಯ ಹೆಣ್ಣೂರು(Hennur) ಪೊಲೀಸ್ ಠಾಣಾ ವ್ಯಾಪ್ತಿಯ ಚೆಲ್ಲಕೆರೆಯ ಡೆಲ್ಲಿ ಪ್ರೀ ಸ್ಕೂಲ್(Delhi pre-school)ನಲ್ಲಿಯೇ ಈ ಘಟನೆ ನಡೆದಿದ್ದು, 4 ವರ್ಷದ ಮಗು ಮಹಡಿಯಿಂದ ಬಿದ್ದು ತಲೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಜಿನಾ ಅನ್ನಾ ಜಿಟೋ ಎಂಬ ಮಗು ಚಿಕಿತ್ಸೆ ಪಡೆಯುತ್ತಿದೆ. ಆದರೆ, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಖಾಸಗಿ ಕಂಪೆನಿಯಲ್ಲಿ ಟೆಕ್ಕಿಗಳಾಗಿರುವ ಜಿನಾ ತಂದೆ ಜಿಟೋ ಟಾಮಿ ಜೋಸೆಫ್ ಮತ್ತು ತಾಯಿ ಬಿನಿಟೋ ಥಾಮಸ್, ಮೂಲತಃ ಕೇರಳದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ಬಂದು ನೆಲೆಸಿದ್ದರು. ಹೀಗಾಗಿ ಮಗುವನ್ನು ಇಲ್ಲಿಯ ಖಾಸಗಿ ಶಾಲೆಗೆ ಸೇರಿಸಿದ್ದರು. ಈ ಸಂದರ್ಭದಲ್ಲಿಯೇ ಈ ಅವಘಡ ನಡೆದಿದ್ದು, ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.








