ದೇಶದ ಎಲ್ಲಾ ನಾಗರಿಕರಿಗೆ ಉಚಿತ ಲಸಿಕೆ : ಮೋದಿ ಘೋಷಣೆ
ನವದೆಹಲಿ : ದೇಶದ 18 ವರ್ಷದ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ಮೊದಲಿಗೆ ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಅಲ್ಲದೆ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಸಾಂತ್ವಾನ ಹೇಳಿದರು.
ವಿಶ್ವದ ಅನೇಕ ದೇಶಗಳಂತೆ ಭಾರತವೂ ಸಂಕಷ್ಟ ಎದುರಿಸುತ್ತಿದೆ. ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರ ಸಾಂಕ್ರಾಮಿಕ ರೋಗವಾಗಿದೆ.
ಆಧುನಿಕ ಜಗತ್ತು ಇಂತಹ ಮಹಾಮಾರಿಯನ್ನು ಎಂದೂ ಕಂಡಿರಲಿಲ್ಲ. ಭಾರತ ಈ ಸಾಂಕ್ರಾಮಿಕ ರೋಗವನ್ನು ಹಲವು ಸ್ತರಗಳಲ್ಲಿ ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಭಾರತ ತನ್ನ ಶಕ್ತಿ ಮೀರಿ ಕೊರೊನಾ 2ನೇ ಅಲೆ ವಿರುದ್ಧ ಹೋರಾಡುತ್ತಿದೆ. ಕೊರೊನಾ ಲಸಿಕೆ ಪ್ರತಿಯೊಬ್ಬರಿಗೂ ರಕ್ಷಾ ಕವಚವಾಗಿದೆ. ಹೀಗಾಗಿ
ದೇಶಾದ್ಯಂತ ಲಸಿಕಾಕರಣ ಆಗಬೇಕಿದೆ. ಇದು ವರ್ಷಗಟ್ಟಲೆ ಆಗಬಹುದು ಎಂಬ ಆತಂಕ ವ್ಯಕ್ತವಾಯಿತು.
ಹೀಗಾಗಿಯೇ ಇಂದ್ರಧನುಷ್ ಯೋಜನೆಯ ಮೂಲಕ ಲಸಿಕೆ ಹಾಕುವ ಪ್ರಮಾಣ ಹೆಚ್ಚಿಸಿದೆವು. ಈಗ 20 ಕೋಟಿಗೂ ಹೆಚ್ಚು ಲಸಿಕೆಗಳನ್ನ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಕಂಗೆಡಿಸಿರುವ ಅದೃಶ್ಯ ಅಥವಾ ರೂಪಾಂತರಿ ಸೋಂಕಿನ ವಿರುದ್ಧ ಹೋರಾಡಲು ನಮಗೆ ಇರುವ ಅತೀ ದೊಡ್ಡ ಅಸ್ತ್ರ ಅಂದರೆ ಅದು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸುವುದು.
ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿಯೂ ಭಾರತ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಿದೆ.ವಿಶ್ವದಲ್ಲಿ ಅತೀ ಹೆಚ್ಚು ಲಸಿಕೆ ಭಾರತದಲ್ಲಿ ನೀಡಲಾಗುತ್ತಿದೆ.
130 ಕೋಟಿಗೂ ಅಧಿಕ ಜನರಿಗೆ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದೆ ದೇಶದಲ್ಲಿ 23 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದೇವೆ. ಇದೀಗ ಕೋವಿಡ್ ಲಸಿಕೆಯೇ ನಮ್ಮ ಸುರಕ್ಷ ಕವಚವಾಗಿದೆ ಎಂದು ಪ್ರಧಾನಿಗಳು ಹೇಳಿದ್ದಾರೆ.









