ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಜಿಲ್ಲೆಯ ಶಿಕಾರಿಪುರ ತಾಲೂಕು ಈಸೂರಿನ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ ಅವರು ಇಂದು ಈಸೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾದವರು. ಅವರಿಗೆ 104 ವರ್ಷ ವಯಸ್ಸಾಗಿತ್ತು. 4 ಜನ ಗಂಡು ಮಕ್ಕಳು, ಓರ್ವ ಮಗಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಎನ್.ಎಸ್.ಹುಚ್ಚರಾಯಪ್ಪ ಅವರಿಗೆ ಅಂದಿನ ಬ್ರಿಟೀಷ್ ಸರ್ಕಾರ ಮರಣದಂಡಣೆ ಘೋಷಿಸಿತ್ತು. ಹುಚ್ಚರಾಯಪ್ಪ ಅವರು ಅಪ್ರಾಪ್ತ ವಯಸ್ಕರಾಗಿದ್ದರಿಂದಾಗಿ ಸರ್ಕಾರವು ಘೋಷಿಸಿದ್ದ ಮರಣದಂಡನೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಕಂದಾಯ ವಸೂಲಿ ವಿರುದ್ಧ ಪ್ರತಿಭಟನೆ ನಡೆಸಿ, ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ದೇಶದ ಏಕೈಕ ಗ್ರಾಮ ಈಸೂರು. ಗ್ರಾಮಸ್ಥರು ತಮ್ಮದೇ ಆದ ಸರ್ಕಾರವನ್ನು ರಚಿಸಿಕೊಂಡು ಆಡಳಿತ ನಡೆಸಲು ಹೋರಾಟ ನಡೆಸಿದವರಲ್ಲಿ ಪ್ರಮುಖಪಾತ್ರ ವಹಿಸಿದ್ದ ಅನೇಕರಲ್ಲಿ ಹುಚ್ಚರಾಯಪ್ಪ ಅವರೂ ಒಬ್ಬರು.
ಸ್ವತಂತ್ರ ಹಳ್ಳಿ ಎಂದು ಘೋಷಿಸಿಕೊಂಡು ಆಡಳಿತ ನಡೆಸುತ್ತಿದ್ದ ಈಸೂರು ಗ್ರಾಮಸ್ಥರ ಮೇಲೆ ಬ್ರಿಟೀಷ್ ಸರ್ಕಾರ ಲಾಠಿ ಪ್ರಹಾರ ನಡೆಸಿತ್ತು. ಇದರಿಂದ ರೊಚ್ಚಿಗೆದ್ದ ಜನ ಅಮಲ್ದಾರ ಮತ್ತು ಪೊಲೀಸ್ ಅಧಿಕಾರಿಗಳನ್ನು ಕೊಂದುಹಾಕಿದ್ದರು. ಇದರಿಂದಾಗಿ ಹಳ್ಳಿಯವರು ಪೊಲೀಸರ ದೌರ್ಜನ್ಯಕ್ಕೆ ಒಳಗಾದರು. ಬ್ರಿಟೀಷ್ ಆಡಳಿತಗಾರರು 5 ಮಂದಿಯನ್ನು ಗಲ್ಲಿಗೇರಿಸಿ ಸೇಡು ತೀರಿಸಿಕೊಂಡರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಹುಚ್ಚರಾಯಪ್ಪ ಅವರನ್ನು ದೇಶದ ಪ್ರಧಾನಮಂತ್ರಿಗಳಾಗಿದ್ದ ಇಂದಿರಾ ಗಾಂಧಿಯವರು ತಾಮ್ರಪತ್ರ ನೀಡಿ ಗೌರವಿಸಿದ್ದರು. ಅಲ್ಲದೇ ಆಡಳಿತಾರೂಢ ಸರ್ಕಾರಗಳು ಹುಚ್ಚರಾಯಪ್ಪ ಅವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ವರದಿ:- ಬಿ. ರೇಣುಕೇಶ್, ಶಿವಮೊಗ್ಗ








