ಅಭಿವ್ಯಕ್ತಿ ಸ್ವಾತಂತ್ರ ಬಹಳ ಕಷ್ಟದಲ್ಲಿದೆ : ಸಿದ್ದರಾಮಯ್ಯ Siddaramaiah saaksha tv
ಬೆಂಗಳೂರು : ಮಹಾತ್ಮ ಗಾಂಧಿ ಮತ್ತು ಬಸವಣ್ಣ, ಬುದ್ಧನ ತತ್ವ ಪಾಲನೆ ಮಾಡುವಲ್ಲಿ ನಾವೆಲ್ಲಾ ವಿಫಲವಾಗಿದ್ದೇವೆ. ಇಂದು ಅಭಿವ್ಯಕ್ತಿಯ ಸ್ವಾತಂತ್ರ ಬಹಳ ಕಷ್ಟದಲ್ಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರದ ಗಾಂಧಿಭವನದಲ್ಲಿ ಇಂದು ಸಾಹಿತಿ.ಎಸ್.ಜಿ.ಸಿದ್ದರಾಮಯ್ಯ ಆತ್ಮಕಥೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಇತ್ತೀಚೆಗೆ ನಡೆದ ನಾದಬ್ರಹ್ಮ ಹಂಸಲೇಖ ಅವರ ವಿವಾದದ ಬಗ್ಗೆ ಮಾತನಾಡಿದರು. ಹಂಸಲೇಖ ಏನು ಮಹಾ ಅಪರಾಧ ಮಾಡಿದ್ರಾ ಎಂದು ಪ್ರಶ್ನಿಸಿ, ಒಂದು ಹೇಳಿಕೆ ಕೊಟ್ರು, ಅದಕ್ಕೆ ಎಲ್ಲರೂ ತಿರುಗಿಬಿದ್ರು. ಅದು ಯಾವ ಪೀನಲ್ ಕೋಡ್ ನಲ್ಲಿ ಬರುತ್ತೆ ಅಂತ ನನಗಂತೂ ಗೊತ್ತಿಲ್ಲ ಎಂದು ನುಡಿದರು.
ಇದೇ ವೇಳೆ ಸಮಾಜದಲ್ಲಿ ಶಿಕ್ಷಣದ ಜತೆಗೆ ವೈಚಾರಿಕತೆ ಬೆಳೆಯಬೇಕು ಎಂದು ಆಶಿಸಿದ ಸಿದ್ದರಾಮಯ್ಯ, ಪ್ರತಿಯೊಂದನ್ನ ಪ್ರಶ್ನೆ ಮತ್ತು ವಿಶ್ಲೇಷಣೆ ಮಾಡಬೇಕು. ಆಗ ಮಾತ್ರ ಜಡ್ಡುಗಟ್ಟಿರುವ ಸಮಾಜದಲ್ಲಿ ಉತ್ತಮ ಪ್ರಜೆಗಳು ಆಗುವುದಕ್ಕೆ ಸಾಧ್ಯವಾಗುತ್ತೆ ಎಂದು ಪ್ರತಿಪಾದಿಸಿದರು.
ಇನ್ನು ದೇಶದಲ್ಲಿ ದಿನೇ ದಿನೇ ಅನಿಷ್ಠ ಪದ್ದತಿಗಳು ಹೆಚ್ಚಾಗುತ್ತಿವೆ. ಗಾಂಧಿ ಮತ್ತು ಬಸವಣ್ಣ, ಬುದ್ದನ ತತ್ವ ಪಾಲನೆ ಮಾಡುವಲ್ಲಿ ವಿಫಲವಾಗಿದ್ದೇವೆ. ನೇರವಾಗಿ ನಿಷ್ಠುರವಾಗಿ ಸತ್ಯ ಹೇಳುವುದೇ ಕಷ್ಟವಾಗಿದೆ. ಇಂದು ಅಭಿವ್ಯಕ್ತಿ ಸ್ವಾತಂತ್ರ ಬಹಳ ಕಷ್ಟದಲ್ಲಿದೆ ಎಂದು ಬೇಸರ ಹೊರಹಾಕಿದರು.
ಇದಕ್ಕೂ ಮುನ್ನ ಮಾತನಾಡಿದ್ದ ಹಂಸಲೇಖ ಅವರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಸಹಾಯವನ್ನು ಸ್ಮರಿಸಿದರು. ಜೊತೆಗೆ ಸಿದ್ದರಾಮಯ್ಯ ಮತ್ತೆ ನಾಡಿ ಮುಖ್ಯಮಂತ್ರಿಯಾಗಬೇಕು ಅಂತಾ ಆಶಿಸಿದರು.