ಫ್ರೆಂಚ್ ಓಪನ್ 2021- ಫೈನಲ್ ನಲ್ಲಿ ಬಾರ್ಬೊರ ಮತ್ತು ಅನಾಸ್ಟೆಸಿಯಾ ಫೈಟ್
ಇದು ಆಕೆಯ 50ನೇ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿ. ಕಳೆದ 49 ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಆಡಿದ್ದೇ ದೊಡ್ಡ ಸಾಧನೆ. ಮೂರು ಬಾರಿ ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು ಯುಎಸ್ ಓಪನ್ ಟೂರ್ನಿಗಳಲ್ಲಿ ತಲಾ ಒಂದೊಂದು ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು ಇಲ್ಲಿಯವರಿಗಿನ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಲ್ಲಿ ಶ್ರೇಷ್ಠ ಸಾಧನೆಯಾಗಿತ್ತು.
ಆದ್ರೆ ಈ ಬಾರಿಯ ಫ್ರೆಂಚ್ ಓಪನ್ ಟೂರ್ನಿ ಆಕೆಯ ಪಾಲಿಗೆ ಅವಿಸ್ಮರಣೀಯ. ಯಾರು ಊಹಿಸದ ರೀತಿಯಲ್ಲಿ ಇದೀಗ ಫೈನಲ್ ಪ್ರವೇಶಿಸಿದ್ದಾಳೆ. ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದಳೆ. ಅಂದ ಹಾಗೇ ಆಕೆಯ ಹೆಸರು ಅನಾಸ್ಟೆಸಿಯಾ ಪಾವ್ಲುಚೆಂಕೊವಾ. 30ರ ಹರೆಯದ ಅನಾಸ್ಟೆಸಿಯಾ ತನ್ನ ಬಹುದಿನಗಳ ಕನಸನ್ನು ಪ್ಯಾರಿಸ್ ನ ರೋಲ್ಯಾಂಡ್ ಗ್ಯಾರೋಸ್ ಅಂಗಣದಲ್ಲಿ ನನಸಾಗಿಸಿಕೊಳ್ಳುತ್ತಾರಾ ಅನ್ನೋದು ಶನಿವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನಿರ್ಧಾರವಾಗಲಿದೆ.
ರೋಲ್ಯಾಂಡ್ ಗ್ಯಾರೋಸ್ ನ ಆವೆ ಮಣ್ಣಿನ ಅಂಗಣದಲ್ಲಿ ನಡೆದ ಮಹಿಳೆಯರ ಸೆಮಿಫೈನಲ್ ಪಂದ್ಯದಲ್ಲಿ ಅನಾಸ್ಟೆಸಿಯಾ ಅವರು 7-5, 6-3ರಿಂದ ಸ್ಲೋವೆನಿಯಾದ ತಮಾರ ಝಿಡಾಂಸೆಕ್ ಅವರನ್ನು ಮಣಿಸಿದ್ರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಚೆಕ್ ಗಣರಾಜ್ಯದ ಬಾರ್ಬೊರ ಕ್ರೆಝಿಕೊವಾ ಕೂಡ ಚೊಚ್ಚಲ ಬಾರಿ ಗ್ರ್ಯಾಂಡ್ ಸ್ಲಾಂ ಫೈನಲ್‍ಗೇರಿದ್ದಾರೆ.
ಬಾರ್ಬೊರ ಕೂಡ ಡಬಲ್ಸ್ ನಲ್ಲಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ಗ್ರ್ಯಾಂಡ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಆದ್ರೆ ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಗಳಲ್ಲಿ ಬಾರ್ಬೊರ ಸಾಧನೆ ಕೂಡ ಅಷ್ಟಕ್ಕಷ್ಟೇ. ಇದೀಗ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಅನಾಸ್ಟೆಸಿಯಾ ಅವರಿಗೆ ಫೈನಲ್ ಪಂದ್ಯದಲ್ಲಿ ಸವಾಲು ಹಾಕಲಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಬಾರ್ಬೊರ ಕ್ರೇಝಿಕೊವಾ ಅವರು 7-5, 4-6, 9-7ರಿಂದ ಗ್ರೀಕ್ ನ ಮರಿಯಾ ಸಕಾರಿ ವಿರುದ್ಧ ರೋಚಕ ಜಯ ಸಾಧಿಸಿದ್ರು. ಈ ಮೂಲಕ ಚೆಕ್ ಗಣರಾಜ್ಯದ ಪರ 40 ವರ್ಷಗಳ ಬಳಿಕ ಫ್ರೆಂಚ್ ಓಪನ್ ನಲ್ಲಿ ಫೈನಲ್ ಗೇರಿದ್ದ ಸಾಧನೆ ಮಾಡಿದ್ದಾರೆ. 1981ರಲ್ಲಿ ಚೆಕ್ ಗಣರಾಜ್ಯದ ಹಾನಾ ಮಾಂಡ್ಲಿಕೊವಾ ಅವರು ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಇದೀಗ ಆ ಸಾಧನೆ ಮಾಡಲು ಬಾರ್ಬೊರ ಅವರಿಗೆ ಚಿನ್ನದಂತ ಅವಕಾಶ ಸಿಕ್ಕದೆ.