ಡೆಲ್ಲಿಯ ಚೀಕೂ… ವಿಶ್ವ ಕ್ರಿಕೆಟ್ ನ ಕಿಂಗ್.. ಹ್ಯಾಪಿ ಬರ್ತ್ ಡೇ ವಿಕೊ..!
ವಿರಾಟ್ ಕೊಹ್ಲಿ..
ಹುಟ್ಟಿದ್ದು ನವೆಂಬರ್ 5, 1988
ಡೆಲ್ಲಿಯ ಮಧ್ಯಮ ಕುಟುಂಬದ ಹುಡುಗ. ಅಪ್ಪ ಪ್ರೇಮ್ ಕೊಹ್ಲಿ.. ಕ್ರಿಮಿನಲ್ ಲಾಯರ್. ತಾಯಿ ಸರೋಜ ಕೊಹ್ಲಿ.. ಗೃಹಿಣಿ. ವಿಕಾಸ್ ಕೊಹ್ಲಿ ಮತ್ತು ಭಾವನಾ ಕೊಹ್ಲಿಯವರ ಪ್ರೀತಿಯ ತಮ್ಮ ಈ ಚೀಕೂ..
ಎಲ್ಲರಂತೆ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ವಿರಾಟ್ ಕೊಹ್ಲಿಯ ಕ್ರಿಕೆಟ್ ಪ್ರತಿಭೆಯನ್ನು ಬೆಳಕಿಗೆ ತಂದಿದ್ದು ಕೋಚ್ ರಾಜ್ ಕುಮಾರ್ ಶರ್ಮಾ.
ಚಿಕ್ಕ ವಯಸ್ಸಿನಲ್ಲೇ ವಿರಾಟ್ ಕೊಹ್ಲಿಯವರಲ್ಲಿ ಅದ್ಭುತ ಪ್ರತಿಭೆ ಇತ್ತು. ಆದ್ರೆ ತುಂಬಾನೇ ತುಂಟಾ. ಒರಟ. ಸುಮ್ಮನೆ ಕೂರುವ ಜಾಯಮಾನವಲ್ಲ. ಎಷ್ಟೇ ಬೈದ್ರೂ, ಹೊಡೆದ್ರೂ ವಿರಾಟ್ ಕೊಹ್ಲಿ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳುತ್ತಿರಲಿಲ್ಲ.
ಹೀಗಾಗಿ ಕೋಚ್ ರಾಜ್ ಕುಮಾರ್ ಶರ್ಮಾ ಅವರು, ವಿರಾಟ್ ನ ಎಲ್ಲಾ ತುಂಟಾಟಗಳನ್ನು ಸಹಿಸಿಕೊಂಡು ಕ್ರಿಕೆಟ್ ಆಟದ ಗ್ರಾಮರ್ ಗಳನ್ನು ಹೇಳಿಕೊಟ್ಟಿದ್ದರು.
ಯಾಕಂದ್ರೆ ರಾಜ್ ಕುಮಾರ್ ಶರ್ಮಾ ಅವರಿಗೆ ವಿರಾಟ್ ಕೊಹ್ಲಿಯ ಮೇಲೆ ಅಪಾರ ನಂಬಿಕೆ ಇತ್ತು. ಈ ಹುಡುಗ ಮುಂದೊಂದು ದಿನ ವಿಶ್ವ ಕ್ರಿಕೆಟ್ ನ ತಾರೆಯಾಗುತ್ತಾನೆ ಅನ್ನೋ ಅಪಾರವಾದ ವಿಶ್ವಾಸವಿತ್ತು.
ಇದಕ್ಕೆ ಕಾರಣವೂ ಇದೆ. ಯಾಕಂದ್ರೆ ವಿರಾಟ್ ಕೊಹ್ಲಿಯ ಆತ್ಮವಿಶ್ವಾಸ, ಧೈರ್ಯ, ಬದ್ಧತೆ, ಆಕ್ರಮಣಕಾರಿ ಪ್ರವೃತ್ತಿಯೇ ಮುಖ್ಯ ಕಾರಣವಾಗಿತ್ತು. ಶಾಲಾ ಕಾಲೇಜ್ ಟೂರ್ನಿಗಳಲ್ಲಿ ಯಾವುದೇ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಲು ಕೂಡ ಹಿಂದೆ ಮುಂದೆ ಯೋಚನೆ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಸೋಲನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಗೆಲುವಿನ ಹಸಿವು ಚೀಕೂಗೆ ನೀಗುತ್ತಿರಲಿಲ್ಲ. ಪ್ರತಿ ಪಂದ್ಯದಲ್ಲೂ ಗೆಲ್ಲಲೇಬೇಕು. ರನ್ ಗಳಿಸಲೇಬೇಕು ಅನ್ನೋ ಸಿದ್ಧಾಂತವನ್ನು ವಿರಾಟ್ ಕೊಹ್ಲಿ ಮೈಗೂಡಿಸಿಕೊಂಡಿದ್ದರು.
ಅವಕಾಶಕ್ಕಾಗಿ ಬಕಪಕ್ಷಿಯಂತೆ ಕಾಯುತ್ತಿದ್ದ ವಿರಾಟ್ ಕೊಹ್ಲಿ ವಿವಿಧ ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚು ಹರಿಸಿದ್ದರು.
ಪರಿಣಾಮ ವಿರಾಟ್ 19 ವಯೋಮಿತಿ ವಿಶ್ವ ಕಪ್ ಟೂರ್ನಿಗೆ ಭಾರತ ತಂಡದ ನಾಯಕನಾಗಿ ಪ್ರಶಸ್ತಿ ಕೂಡ ಗೆದ್ದುಕೊಂಡಿದ್ದರು. ಹಾಗೇ 18ರ ಹರೆಯದಲ್ಲೇ ರಣಜಿ ಟೂರ್ನಿಗೂ ಎಂಟ್ರಿಯಾಗಿದ್ದರು. ಕರ್ನಾಟಕ ವಿರುದ್ಧದ ಪಂದ್ಯದ ವೇಳೆ ತನ್ನ ತಂದೆಯ ಸಾವಿನ ಸುದ್ದಿ ಕೇಳಿಯೂ ಮೈದಾನದಲ್ಲಿ ಕ್ರಿಕೆಟ್ ಆಡಿ ತನ್ನ ಬದ್ಧತೆ ಏನು ಎಂಬುದನ್ನು ತೋರಿಸಿಕೊಟ್ಟಿದ್ದರು.
19 ವಯೋಮಿತಿ ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಹಿಂತಿರುಗಿ ನೋಡಲೇ ಇಲ್ಲ. ಇದೇ ವೇಳೆ ಟೀಮ್ ಇಂಡಿಯಾಗೂ ಎಂಟ್ರಿ ಪಡೆದುಕೊಂಡ್ರು. ಬಳಿಕ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಕಣ್ಮನಿಯಾದ್ರು.
ಮೊದ ಮೊದಲು ಟೀಮ್ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದರು. ಹಿರಿಯ ಆಟಗಾರರ ಉಪಸ್ಥಿತಿಯಲ್ಲೂ ವಿರಾಟ್ ಕೊಹ್ಲಿ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ್ರು.
ಇನ್ನು ಟೀಮ್ ಇಂಡಿಯಾದ ಹಿರಿಯ ಆಟಗಾರರು ತೆರೆಮರೆಗೆ ಸರಿದಾಗ ಟೀಮ್ ಇಂಡಿಯಾದ ರನ್ ಮೇಷಿನ್ ಆಗಿ ರೂಪುಗೊಂಡವರೇ ವಿರಾಟ್ ಕೊಹ್ಲಿ.
ಬಳಿಕ ಧೋನಿಯ ಉತ್ತರಾಧಿಕಾರಿಯಾಗಿ ಟೆಸ್ಟ್ ತಂಡವನ್ನು ಮುನ್ನಡೆಸಿದ್ದ ವಿರಾಟ್ ಕೊಹ್ಲಿ ನಂತರ ಏಕದಿನ ಮತ್ತು ಟಿ-ಟ್ವೆಂಟಿ ಸೇರಿ ಮೂರು ಮಾದರಿಯ ಕ್ರಿಕೆಟ್ಗೂ ವಿರಾಟ್ ಕೊಹ್ಲಿ ನಾಯಕನಾದ್ರು.
ನಾಯಕತ್ವದ ಜವಾಬ್ದಾರಿಯ ಜೊತೆಗೆ ಟೀಮ್ ಇಂಡಿಯಾದ ರನ್ ಮೇಷಿನ್ ಆಗಿದ್ದ ವಿರಾಟ್ ಕೊಹ್ಲಿ ನೋಡ ನೋಡುತ್ತಿದ್ದಂತೆ ಶತಕದ ಮೇಲೆ ಶತಕ ದಾಖಲಿಸಿಕೊಂಡು ಹೋದ್ರು.
ಪರಿಸ್ಥಿತಿ ಹೇಗೆ ಇರಲಿ, ಒತ್ತಡ ಎಷ್ಟೇ ಇರಲಿ.. ಸವಾಲು ಎಷ್ಟೇ ಇರಲಿ.. ವಿರಾಟ್ ಬ್ಯಾಟ್ ನಿಂದ ಮಾತ್ರ ಸರಾಗವಾಗಿ ರನ್ ಗಳು ನೀರಿನಂತೆ ಹರಿದುಬರುತ್ತಿವೆ. ಇದು ವಿರಾಟ್ ಕೊಹ್ಲಿಯ ಸ್ಪೇಷಾಲಿಟಿ ಕೂಡ ಹೌದು.
ಸದ್ಯ
ಸದ್ಯ ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 27 ಶತಕ ಹಾಗೂ 7240 ರನ್ ಗಳಿಸಿದ್ದಾರೆ. ಹಾಗೇ 248 ಏಕದಿನ ಪಂದ್ಯಗಳಲ್ಲಿ 43 ಶತಕ ದ ಜೊತೆಗೆ 11,867 ರನ್ ದಾಖಲಿಸಿದ್ದಾರೆ. 82 ಟಿ -20 ಪಂದ್ಯಗಳಲ್ಲಿ 2794 ರನ್ ಪೇರಿಸಿದ್ದಾರೆ. ಒಟ್ಟು 70 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕ್ತಾರೆ ಅನ್ನೋದು ಕ್ರಿಕೆಟ್ ಪಂಡಿತರ ಅಭಿಮತವಾಗಿದೆ.
ಪ್ರಮುಖ ಸರಣಿಗಳನ್ನು ಗೆದ್ದುಕೊಂಡು ಟೀಮ್ ಇಂಡಿಯಾದ ಯಶಸ್ವಿ ನಾಯಕನಾಗಿರುವ ವಿರಾಟ್ ಕೊಹ್ಲಿಯ ಮೇಲೆ ಕೆಲವೊಂದು ಆರೋಪಗಳು ಇವೆ.
ಮುಖ್ಯವಾಗಿ ವಿರಾಟ್ ಕೊಹ್ಲಿ ಮೈದಾನದಲ್ಲಿ ನಾಯಕನಾಗಿದ್ರೂ ತನ್ನ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ ಅನ್ನೋದು ಕೆಲವರ ಆರೋಪ. ಆದ್ರೆ ವಿರಾಟ್ ಕೊಹ್ಲಿ ಇರೋದೇ ಹಾಗೇ. ಗೆಲುವೇ ಅವರ ಮೂಲ ಮಂತ್ರವಾಗಿದೆ. ಹೀಗಾಗಿ ವಿರಾಟ್ ತನ್ನ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ.
ಇನ್ನೊಂದೆಡೆ ವಿರಾಟ್ ಇಷ್ಟೇಲ್ಲಾ ಸಾಧನೆ ಮಾಡಿದ್ರೂ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಐಸಿಸಿ ಟ್ರೋಫಿಗಳಲ್ಲಿ ಕೊಹ್ಲಿ ಉತ್ತಮ ಪ್ರದರ್ಶನವನ್ನು ನೀಡಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ರೂ ತಂಡಕ್ಕೆ ಪ್ರಶಸ್ತಿ ದಕ್ಕಿಸಿಕೊಡಲು ಸಾಧ್ಯವಾಗಿಲ್ಲ ಅನ್ನೋ ನೋವು ಅವರಲ್ಲಿದೆ.
ಇನ್ನು ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್ ಕೊಹ್ಲಿಗೆ ಪ್ರಶಸ್ತಿ ದಕ್ಕಿಲ್ಲ. ಈ ಬಾರಿ ಪ್ಲೇ ಆಫ್ ಗೆ ಎಂಟ್ರಿಯಾಗಿರುವ ಆರ್ ಸಿಬಿಗೆ ವಿರಾಟ್ ಕೊಹ್ಲಿ ಪ್ರಶಸ್ತಿ ಗೆಲ್ಲಿಸಿಕೊಡುತ್ತಾರೆ ಅನ್ನೋ ನಂಬಿಕೆ ಆರ್ ಸಿಬಿ ಅಭಿಮಾನಿಗಳದ್ದು.
ಇದೀಗ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಅಪ್ಪನಾಗುತ್ತಿರುವ ಸಂತಸದಲ್ಲಿದ್ದಾರೆ. ಡೆಲ್ಲಿಯ ಚೀಕೂ ವಿಶ್ವಕ್ರಿಕೆಟ್ ನ ಕಿಂಗ್ ಆಗಿ ಬೆಳೆದು ಬಂದಿರುವುದು ಅಸಾಮಾನ್ಯವೇ ಸರಿ. ಯಾವುದು ಅಸಾಧ್ಯವೋ ಅದು ಸಾಧ್ಯ ಅಂತ ನಿರೂಪಿಸುವುದೇ ವಿರಾಟ್ ಕೊಹ್ಲಿಯ ತಾಕತ್ತು.. ! ಹ್ಯಾಪಿ ಬರ್ತ್ ಡೇ ಚೀಕೂ..!








