ಇಂಧನ ಬೆಲೆ ಏರಿಕೆ : 100-ನಾಟೌಟ್ ಹೆಸರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು : ಕೊರೊನಾ ಸಂಕಷ್ಟದಲ್ಲೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿರಂತರವಾಗಿ ಏರಿಸುತ್ತಿರುವುದನ್ನ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ಶಿವಾನಂದ ವೃತ್ತದ ಪೆಟ್ರೋಲ್ ಬಂಕ್ ಮುಂಭಾಗ 100-ನಾಟೌಟ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
ಇದರಲ್ಲಿ ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್ ಮತ್ತಿತರರು ಪಾಲ್ಗೊಂಡರು. ಈ ಪ್ರತಿಭಟನೆಯೂ ಇಂದಿನಿಂದ ರಾಜ್ಯಾದ್ಯಂತ ಐದು ದಿನಗಳ ಕಾಲ ನಡೆಯಲಿದೆ.
ಇಂದು ಕೂಡ ತೈಲ ಬೆಲೆ ಏರಿಕೆ..!
ದೇಶದಲ್ಲಿ ಮತ್ತೆ ಇಂಧನ ಬೆಲೆ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 29 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ಮೇಲೆ 29 ಪೈಸೆ ಬೆಲೆ ಹೆಚ್ಚಳವಾಗಿದೆ.
ದೇಶದಲ್ಲಿ ಕೊರೊನಾ ಅಬ್ಬರ.. ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪದೇ ಪದೇ ಇಂಧನ ಬೆಲೆ ಏರಿಕೆಯಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ.
ಇನ್ನು ಇಂದಿನ ಬೆಲೆ ಏರಿಕೆಯೊಂದಿಗೆ ಬೆಂಗಳೂರಿನಲ್ಲಿ ಪೆಟ್ರೋಲ್ 99.05 ರೂ., ಡೀಸೆಲ್ 91.97 ರೂಪಾಯಿಗೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ 95.85 ರೂ., ಡೀಸೆಲ್ 86.75 ರೂ. ದಾಖಲಾಗಿದೆ. ಮುಂಬೈನಲ್ಲಿ ಪೆಟ್ರೋಲ್ 102.04 ರೂ., ಡೀಸೆಲ್ 94.15 ರೂ., ಪಾಟ್ನಾದಲ್ಲಿ ಪೆಟ್ರೋಲ್ 97.95 ರೂ., ಡೀಸೆಲ್ 92.05 ರೂ. , ಚೆನ್ನೈನಲ್ಲಿ ಪೆಟ್ರೋಲ್ 97.19 ರೂ., ಡೀಸೆಲ್ 91.42 ರೂ ಆಗಿದೆ.