ಕೊಡಗಿನಲ್ಲಿ ಸೋಮವಾರದ ಬೆಳಗ್ಗಿನ ವರೆಗೆ ಸಂಪೂರ್ಣ ಲಾಕ್ಡೌನ್
ಕೊಡಗು, ಜುಲೈ 18: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಸಂಜೆಯಿಂದ ಸೋಮವಾರದ ಬೆಳಗ್ಗೆ ವರೆಗೆ ಸಂಪೂರ್ಣವಾಗಿ ಲಾಕ್ಡೌನ್ ಮಾಡುವುದಾಗಿ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.
ವಾರಾಂತ್ಯದಲ್ಲಿ ಕೊಡಗು ಜಿಲ್ಲೆಗೆ ಹೊರಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿರುವ ಹಿನ್ನಲೆಯಲ್ಲಿ ಮತ್ತು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಂಡಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂಜಾಗ್ರತಾ ದೃಷ್ಟಿಯಿಂದ ಶುಕ್ರವಾರ ಸಂಜೆಯಿಂದ ಸೋಮವಾರದವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ, ಮೆಡಿಕಲ್ ಶಾಪ್ ಗಳು, ಪೆಟ್ರೋಲ್ ಬಂಕ್, ಸರ್ಕಾರಿ ಆಹಾರ ಮಳಿಗೆಗಳಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಸರ್ಕಾರಿ ಸಾರಿಗೆ ಸಂಪೂರ್ಣ ಬಂದ್ ಆಗಲಿದ್ದು, ತುರ್ತು ಸೇವೆಗಳಿಗೆ ಮಾತ್ರ ಆಟೋಗಳನ್ನು ಬಳಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಅವರು ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯಮಾಪನಕ್ಕೆ ಹಾಜರಾಗುವ ಶಿಕ್ಷಕರಿಗೆ ಸ್ವಂತ ವಾಹನ ಅಥವಾ ನಿಗದಿಪಡಿಸಿರುವ ಬಸ್ ಗಳಲ್ಲಿ ಬರುವಂತೆ ಸೂಚನೆ ನೀಡಲಾಗಿದ್ದು, ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದು, ಈ ನಿಯಮಗಳನ್ನು ಜುಲೈ 31ರವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.








