ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐದು ತಾಲೂಕುಗಳನ್ನು ಇಂದಿನಿಂದ ಜುಲೈ 22ರವರೆಗೆ ಒಂದು ವಾರಗಳ ಕಾಲ ಲಾಕ್‍ಡೌನ್ ಮಾಡಲಾಗಿದೆ.
ಜಿಲ್ಲಾ ಕೇಂದ್ರ ಬೆಳಗಾವಿಯನ್ನು ಹೊರತುಪಡಿಸಿ ಅಥಣಿ, ಕಾಗವಾಡ, ನಿಪ್ಪಾಣಿ, ಗೋಕಾಕ್ ಹಾಗೂ ಮೂಡಲಗಿ ತಾಲೂಕುಗಳನ್ನು ಲಾಕ್‍ಡೌನ್ ಮಾಡಲಾಗಿದೆ.
ಆದರೆ, ಚಿಕ್ಕೋಡಿ, ರಾಯಭಾಗ ಸೇರಿದಂತೆ ಮೂರು ತಾಲೂಕುಗಳಲ್ಲಿ ಸ್ವಯಂಪ್ರೇರಿತ ಲಾಕ್‍ಡೌನ್ ಮಾಡಲು ಸ್ಥಳೀಯರು ನಿರ್ಧರಿಸಿದ್ದಾರೆ.
ಐದು ತಾಲೂಕುಗಳನ್ನು ಲಾಕ್‍ಡೌನ್ ಮಾಡಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಈ ತಾಲೂಕುಗಳ ವ್ಯಾಪ್ತಿಯಲ್ಲಿ ಕಳೆದ 2 ವಾರಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದ್ದು, ಮರಣ ಪ್ರಮಾಣವೂ ಕೂಡ ಹೆಚ್ಚಳವಾಗಿದೆ. ಈ ಸಂಬಂಧ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕುಗಳ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ.
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರಿಗೂ ಸಹ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ ಐದು ದಿನಗಳಿಂದ ಅನಿಲ್ ಬೆನಕೆ ಅವರಿಗೆ ಕೊರೊನ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ಸ್ವಯಂ ಹೋಂಕ್ವಾರಂಟೈನ್‍ಗೆ ಒಳಗಾಗಿದ್ದರು.
ಜಿಲ್ಲೆಯ ಹಲವು ತಾಲೂಕುಗಳು ಮಾತ್ರವಲ್ಲದೆ ಬೆಳಗಾವಿ ನಗರದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ. ನಿನ್ನೆ ಒಂದೇ ದಿನ 64 ಹೊಸ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ಪಾಸಿಟಿವ್ ಸಂಖ್ಯೆ 561ಕ್ಕೆ ಏರಿಕೆಯಾಗಿದೆ.