ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಸಾವನ್ನಪ್ಪಿದ್ದ ಇಬ್ಬರು ಅಪರಿಚಿತರ ಶವಗಳನ್ನು ಬೆಳಗಾವಿಯ ಸ್ಮಶಾನದಲ್ಲಿ ಮಹಾನಗರ ಪಾಲಿಕೆ ಹಾಗೂ ಸಮಾಜಸೇವಕ ವಿಜಯ್ ಮೋರೆ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ಹೌದು ನಂದಗಡ ಗ್ರಾಮದಲ್ಲಿ ಕಲಬುರ್ಗಿಯಿಂದ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯೊರ್ವ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊರ್ವ ಭಿಕ್ಷುಕ ವ್ಯಕ್ತಿ ಕೂಡ ಸಾವನ್ನಪ್ಪಿದ್ದ. ಈ ಇಬ್ಬರ ಪಾರ್ಥಿವ ಶರೀರವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಈ ಎರಡೂ ಶವಗಳಿಗೆ ಯಾರೂ ವಾರಸುದಾರರು ಇರದೇ ಇರುವುದರಿಂದ ಪಾಲಿಕೆ ವತಿಯಿಂದ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಮಾಜಸೇವಕ ವಿಜಯ್ ಮೋರೆ ಈ ಎರಡೂ ಶವಗಳಿಗೆ ಯಾರೂ ಕೂಡ ದಿಕ್ಕಿರಲಿಲ್ಲ. ಹೀಗಾಗಿ ನಾವೇ ಪಾಲಿಕೆ ಸಹಕಾರದಿಂದ ಅಂತ್ಯಕ್ರಿಯೆ ಮಾಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಂಡು ಮಂಡಳಿ ಸದಸ್ಯ ಸಾಜೀದ್ ಶೇಖ್, ನಂದಗಡ ಎಎಸ್‍ಐ ಗೌರಿ, ಆಲನ್ ಮೋರೆ, ಸಂತೋಷ ಮಮದಾಪುರ, ಪಾಲಿಕೆ ಅಭಿಯಂತರಾದ ವ್ಹಿ.ಎಸ್.ಹಿರೇಮಠ, ಮಂಜುಶ್ರೀ ಎಂ, ಚನ್ನಪ್ಪ ನರಸಣ್ಣವರ ಸೇರಿ ಇನ್ನಿತರರು ಉಪಸ್ಥಿತರಿದ್ದರು.