ಗಾಲ್ವಾನ್ ಚೀನಾದ ಪಿತೂರಿ – ವಿದೇಶಾಂಗ ಸಚಿವ ಎಸ್.ಜೈಶಂಕರ್
ಹೊಸದಿಲ್ಲಿ, ಜೂನ್ 18: ಗಾಲ್ವಾನ್ ನಲ್ಲಿ ನಡೆದಿರುವುದು ಚೀನಾದ ಪಿತೂರಿ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಗಾಲ್ವಾನ್ ಕಣಿವೆ ಘರ್ಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪೂರ್ವ ಲಡಾಕ್ನಲ್ಲಿ ಕರ್ತವ್ಯದಲ್ಲಿದ್ದ ಭಾರತೀಯ ಸೈನಿಕರ ಮೇಲೆ ಚೀನಾ ಸೈನಿಕರು ನಡೆಸಿದ ದಾಳಿಯು ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ಭಾರತ ಚೀನಾಕ್ಕೆ ತಿಳಿಸಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬೀಜಿಂಗ್ನಲ್ಲಿರುವ ತಮ್ಮ ಸಹವರ್ತಿಯೊಂದಿಗೆ ಇಂದು ಫೋನ್ ಸಂಭಾಷಣೆಯಲ್ಲಿ ಇದನ್ನು ತಿಳಿಸಿದ್ದಾರೆ.
ದೇಶ ಸೇವೆಯಲ್ಲಿ ನಿರತರಾಗಿದ್ದ ಕರ್ನಲ್ ಸೇರಿದಂತೆ 20 ಸೈನಿಕರು ಸಾವನ್ನಪ್ಪಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗಾಲ್ವಾನ್ ಕಣಿವೆ ಘರ್ಷಣೆಯ ಬಗ್ಗೆ ತಮ್ಮ ಮೊದಲ ಅಭಿಪ್ರಾಯ ವ್ಯಕ್ತಪಡಿಸಿ ಹೇಳಿದ್ದಾರೆ. ಭಾರತ- ಚೀನಾ ಗಡಿಯಲ್ಲಿ ಸುಮಾರು ಐದು ದಶಕಗಳಲ್ಲಿ ನಡೆದ ಕೆಟ್ಟ ಘಟನೆ ಇದಾಗಿದ್ದು ಚೀನಾ ತನ್ನ ಹಳೆಯ ವರಸೆಯನ್ನು ಮುಂದುವರಿಸಿದೆ.
ಶೀತಲ ಗಾಲ್ವಾನ್ ನದಿಯ ಬಳಿ ಸುಮಾರು 15,000 ಅಡಿ ಎತ್ತರದಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ, ಭಾರತದ ಸೈನಿಕರ ಮೇಲೆ ಕಬ್ಬಿಣದ ಸರಳುಗಳು ಮತ್ತು ಉಗುರು ತುಂಬಿದ ಕ್ಲಬ್ಗಳಿಂದ ದಾಳಿ ಮಾಡಲಾಗಿದೆ. ಆದರೆ ನಿಯಮಗಳಿಗೆ ಅನುಸಾರವಾಗಿ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ತಿಳಿದು ಬಂದಿದೆ.
ಕಳೆದ ವಾರ ಉಭಯ ದೇಶಗಳ ಹಿರಿಯ ಮಿಲಿಟರಿ ಅಧಿಕಾರಿಗಳ ನಡುವಿನ ಸಭೆಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿಯಮಗಳ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ ಚೀನಾ ಈಗ ಅದನ್ನು ಉಲ್ಲಂಘಿಸಿದೆ. 20 ಭಾರತೀಯ ಯೋಧರಲ್ಲಿ ಅನೇಕರು ಗಾಯಗಳಿಂದ ಸಾವನ್ನಪ್ಪಿದ್ದಾರೆ.
ಕೊಲ್ಲಲ್ಪಟ್ಟವರಲ್ಲಿ ಹಲವರು ಬಂಡೆಗಳ ಮೇಲಿನಿಂದ ಮತ್ತು ಹಿಮಾವೃತ ನದಿಗೆ ಗುಡ್ಡದಿಂದ ಹೊಡೆದುರುಳಿಸಲ್ಪಟ್ಟಂತೆ ಕಂಡುಬಂದಿದೆ. ಕೊಲ್ಲಲ್ಪಟ್ಟವರ ಮೇಲಿನ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಪ್ರಾಥಮಿಕ ಕಾರಣ ನೀರಿನಲ್ಲಿ ಮುಳುಗಿ ಅಥವಾ ಬಿದ್ದ ರಭಸಕ್ಕೆ ತಲೆಯ ಭಾಗಕ್ಕೆ ಆದ ಗಾಯವು ಸೇರಿದೆ.
ಗಾಯಗೊಂಡ ಇನ್ನು ಕೆಲವು ಸೈನಿಕರು ಈಗ ಗಂಭೀರ ಸ್ಥಿತಿಯಲ್ಲಿದ್ದಾರೆ ಆದರೆ ಸರಕಾರದಿಂದ ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಗಡಿಯಲ್ಲಿನ ಉದ್ವಿಗ್ನತೆಯು ಮೇ ತಿಂಗಳಿನಲ್ಲಿ ಚೀನಾ ವಿವಿಧ ಸ್ಥಳಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯನ್ನು ದಾಟಿ ಗಡಿಯಲ್ಲಿ ಉದ್ವಿಗ್ನತೆ ವಾತಾವರಣ ಸೃಷ್ಟಿಯಾಗಲು ಪ್ರಚೋದನೆ ನೀಡಿತ್ತು . ಪಶ್ಚಿಮ ಹಿಮಾಲಯದ ಪ್ಯಾಂಗೊಂಗ್ ಲೈಕ್ನಲ್ಲಿ ಮುಷ್ಟಿ ಮತ್ತು ಕಲ್ಲು ಎಸೆಯುವ ಘರ್ಷಣೆಯಲ್ಲಿ ಕಳೆದ ತಿಂಗಳು ಹಲವಾರು ಭಾರತೀಯ ಮತ್ತು ಚೀನಾದ ಸೈನಿಕರು ಗಾಯಗೊಂಡಿದ್ದರು.
ಗಾಲ್ವಾನ್ನಲ್ಲಿ, ಭಾರತವು ಕಳೆದ ಅಕ್ಟೋಬರ್ನಲ್ಲಿ ದೌಲತ್ ಬೇಗ್ ಓಲ್ಡಿ ವಾಯುನೆಲೆಗೆ ಹೋಗುವ ರಸ್ತೆಯನ್ನು ಪೂರ್ಣಗೊಳಿಸಿತು.ಅದೆಷ್ಟೋ ವರ್ಷಗಳ ನಿರ್ಲಕ್ಷ್ಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ಸಂಪರ್ಕವನ್ನು ಸುಧಾರಿಸಲು ಮುಂದಾಗಿದೆ ಮತ್ತು 2022 ರ ವೇಳೆಗೆ ಚೀನಾದ ಗಡಿಯಲ್ಲಿ 66 ಪ್ರಮುಖ ರಸ್ತೆಗಳನ್ನು ನಿರ್ಮಿಸಲಾಗುವುದು., ಸಂಪರ್ಕವನ್ನು ಸುಧಾರಿಸಲು ಮತ್ತು ಚೀನಾದ ಉನ್ನತ ಮೂಲಸೌಕರ್ಯದೊಂದಿಗೆ ಅಂತರವನ್ನು ಕಡಿಮೆ ಮಾಡಲು ಭಾರತವು ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ಮಿಸುತ್ತಿದೆ. ಇದರಿಂದ ಕುಪಿತಗೊಂಡ ಚೀನಾ ಸೇನೆ ಪದೇ ಪದೇ ಭಾರತದ ಸೈನಿಕರ ಮೇಲೆ ದಾಳಿ ನಡೆಸುತ್ತಾ ಇದೆ. ಕೆಲವು ಮಾಹಿತಿಗಳ ಪ್ರಕಾರ ಚೀನಾದ ನಲವತ್ತಕ್ಕಿಂತಲೂ ಅಧಿಕ ಸೈನಿಕರು ಜೀವ ಕಳೆದುಕೊಂಡಿದ್ದು, ಚೀನಾದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.