ಹೊಸದಿಲ್ಲಿ, ಮೇ 26 : ಲಾಕ್ ಡೌನ್ ಅವಧಿ ಮುಗಿಯುವವರೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರನ್ನು ಕ್ವಾರಂಟೈನ್ ಮಾಡಬೇಕು ಎಂದು ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಹೇಳಿದ್ದಾರೆ. ಕೊರೋನಾ ವೈರಸ್ ಸೋಂಕಿನಿಂದ ಈಗಾಗಲೇ ಆತಂಕದಲ್ಲಿರುವ ಜನರಿಗೆ ಅವರು ಮತ್ತಷ್ಟು ಭೀತಿ ಹುಟ್ಟಿಸುತ್ತಿದ್ದಾರೆ. ಹಾಗಾಗಿ ಗಾಂಧಿ ಕುಟುಂಬವನ್ನು ಕ್ವಾರಂಟೈನ್ನಲ್ಲಿ ಇಡುವ ಮೂಲಕ ಇದನ್ನು ತಡೆಗಟ್ಟ ಬೇಕೆಂದು ಹೇಳಿದರು.
ಕಾಂಗ್ರೆಸ್ ಸಹ ಇದಕ್ಕೆ ತಿರುಗೇಟು ನೀಡಿದ್ದು, ವೈಯುಕ್ತಿಕ ಟೀಕೆ ಮಾಡುವ ಬದಲು ವಲಸೆ ಕಾರ್ಮಿಕರಿಗೆ ಆಗಿರುವ ತೊಂದರೆ ಬಗ್ಗೆ ಯೋಚಿಸಿ. ಸರ್ಕಾರದ ಯೋಜಿತವಲ್ಲದ ಲಾಕ್ ಡೌನ್ ನಿಂದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರ ಬಗ್ಗೆ ಬಿಜೆಪಿ ಉತ್ತರಿಸಲಿ ಎಂದು ಕಾಂಗ್ರೆಸ್ ಹೇಳಿದೆ. ಮಾರ್ಚ್ 25 ರಂದು ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಆಗಿನಿಂದಲೂ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರತಿಯೊಂದು ವಿಷಯದಲ್ಲೂ ತಪ್ಪುಗಳನ್ನೇ ಹುಡುಕುವುದರಲ್ಲಿ ನಿರತರಾಗಿದ್ದಾರೆ. ಅಷ್ಟೇ ಅಲ್ಲ ಕೊರೊನಾ ಸೋಂಕಿನಿಂದ ಆತಂಕಿತರಾಗಿರುವ ಜನರಲ್ಲಿ ಮತ್ತಷ್ಟು ದಿಗಿಲು ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ವರ್ಮಾ ಈಗ ಲಾಕ್ ಡೌನ್ ವಿಫಲವಾಗಿದೆ ಎನ್ನುವ ಮೂಲಕ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ ಎಂದು ಹೇಳಿದರು.








