ದೇಶದ ಮೊದಲ ಸ್ವಾತಂತ್ರ್ಯ ದಿನದ ಧ್ವಜಾರೋಹಣದಲ್ಲಿ ರಾಷ್ಟ್ರಪಿತ ಗಾಂಧಿ ಭಾಗಿಯಾಗಿರಲಿಲ್ಲ; ಸಂಭ್ರಮದ ದಿನವನ್ನು ಬಾಪು ಸೂತಕದ ದಿನವೆಂದು ಬಗೆದಿದ್ದು ಯಾಕೆ ಗೊತ್ತೇ?
73 ವರ್ಷಗಳ ಹಿಂದೆ ಆಗಸ್ಟ್ 15 ರಂದು ಬ್ರಿಟಿಷರ ಆಡಳಿತದ ಅಂಧಕಾರದಿಂದ ಸ್ವಾತಂತ್ರ್ಯದ ಹೊಸ ಬೆಳಕಿಗೆ ಭಾರತ ತನ್ನನ್ನು ತೆರೆದುಕೊಂಡಿತು. ಅದರೊಂದಿಗೆ ಅವಿಭಜಿತ ಭಾರತವು ಪಾಕಿಸ್ತಾನ ಮತ್ತು ಭಾರತವೆಂದು ವಿಭಜನೆಯಾಗಿಯೂ ಬರೋಬ್ಬರಿ 73 ವರ್ಷಗಳು ಸಂದಿವೆ. ಶತಮಾನಗಳ ಕಾಲದ ಬ್ರಿಟಿಷ್ ಪ್ರಭುತ್ವಕ್ಕೆ ಕೊನೆ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ನಿರ್ಧರಿಸಿ ಹೋರಾಟ ನಡೆಸಿದುದರ ಪ್ರತಿಫಲವಾಗಿ ಬ್ರಿಟಿಷ್ ರಾಜಪ್ರಭುತ್ವವು ಆಕ್ರಮಿಸಿಕೊಂಡ ಸುದೀರ್ಘ ಶತಮಾನಗಳ ಕಾಲದ ನಂತರ ಅಂದರೆ ಆಗಸ್ಟ್ 15, 1947 ರಂದು ಗಡಿಯಾರವು 12.00 ವೇಳೆಯನ್ನು ತೋರಿಸುತ್ತಿದ್ದಂತೆ ಮಧ್ಯರಾತ್ರಿಯಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.

ಜವಾಹರ್ ಲಾಲ್ ನೆಹರುರವರು ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ತಮ್ಮ ಪ್ರಸಿದ್ಧ ‘ಟ್ರಸ್ಟ್ ವಿಥ್ ಡೆಸ್ಟಿನಿ’ ಭಾಷಣ ಮಾಡಿದರು. ಸಂಸತ್ತಿನ ಕಟ್ಟಡದಲ್ಲಿಯೂ ಸಹ ರಾತ್ರಿ ಅಧಿಕೃತ ಕಾರ್ಯ ಆರಂಭವಾಗಿತ್ತು. ಪ್ರಧಾನ ಮಂತ್ರಿಯಾಗಿ ಜವಾಹರಲಾಲ್ ನೆಹರೂ ಅವರೊಂದಿಗೆ ಸಚಿವರ ಸಂಪುಟ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಗೀತೆಯಾಗಿ ವಂದೇ ಮಾತರಂ ಹಾಡಲಾಯಿತು. (ಆಗಿನ್ನೂ ವಂದೇ ಮಾತರಂ ಹಾಡುವ ಬಗ್ಗೆ ಇನ್ನೂ ಯಾವುದೇ ವಿವಾದಗಳಿರಲಿಲ್ಲ)
ಇತ್ತ ದೇಶಕ್ಕೆ ದೇಶವೇ ಸ್ವಾತಂತ್ರ್ಯ ದೊರಕಿದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮಹಾತ್ಮಾ ಗಾಂಧೀಜಿಯವರು ಮಾತ್ರ ಕೋಲ್ಕತ್ತಾ (ಆಗಿನ ಕಲ್ಕತ್ತಾ) ದಲ್ಲಿ ತಮ್ಮ ಕೆಲವು ಆಪ್ತ ಅನುಯಾಯಿಗಳೊಂದಿಗೆ ಉಪವಾಸ ಆಚರಣೆಯಲ್ಲಿ ತೊಡಗಿದ್ದರು. ತನ್ನ ತಾಯಿನಾಡಿಗಾಗಿ ಜೀವನವನ್ನೆಲ್ಲಾ ಅರ್ಪಿಸಿದ ಗಾಂಧೀಜಿ, ಜನರು ಬೇರ್ಪಡುತ್ತಿರುವುದನ್ನು ನೋಡಿ ಮನನೊಂದಿದ್ದರು. ಭಾರತವು ವಿಭಜನೆಯಾಗುವುದಕ್ಕಾಗಿಯೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಾಯಿತು ಎಂದು ದುಃಖಿತರಾಗಿದ್ದರು.

1920 ರ ದಶಕದ ಅಸಹಕಾರ ಚಳವಳಿಯಿಂದ 1930 ರಲ್ಲಿ ಉಪ್ಪಿನ ಸತ್ಯಾಗ್ರಹದವರೆಗೆ ಗಾಂಧೀಜಿಯವರು ದಶಕಗಳವರೆಗೆ ದೇಶದಾದ್ಯಂತ ಬೃಹತ್ ಆಂದೋಲನಗಳಿಗೆ ಮುಂದಾಗಿದ್ದರು. ಭಾರತದಾದ್ಯಂತ ಲಕ್ಷಾಂತರ ಜನರಿಗೆ ಅವರು ಧ್ವನಿಯಾಗಿದ್ದರು.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಬ್ರಿಟಿಷ್ ಮುಕ್ತ ಭಾರತಕ್ಕಾಗಿ ಹೋರಾಟ ನಡೆಸಿದರೆ, ಅಖಿಲ ಭಾರತ ಮುಸ್ಲಿಂ ಲೀಗ್ ಪ್ರತ್ಯೇಕ ಮುಸ್ಲಿಂ ಬಹುಸಂಖ್ಯಾತ ರಾಜ್ಯಕ್ಕಾಗಿ ಪ್ರತಿಪಾದಿಸಿತು. ಭಾರತಕ್ಕೆ ವೈಸರಾಯ್ ಆಗಿಬಂದಿದ್ದ ಲಾರ್ಡ್ ಮೌಂಟ್‌ಬ್ಯಾಟನ್ ಪ್ರತ್ಯೇಕತೆಯನ್ನು ಘೋಷಿಸಿ 1947 ರ ಆಗಸ್ಟ್ 14 ರಂದು ಮಧ್ಯರಾತ್ರಿ ಪಾಕಿಸ್ತಾನವನ್ನು ಜಿನ್ನಾಗೆ ಮತ್ತು ಆಗಸ್ಟ್ 15 ರಂದು ಭಾರತವನ್ನು ನೆಹರೂಗೆ ಹಸ್ತಾಂತರಿಸಿದರು.

ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಲು ನಿರಾಕರಿಸಿದ ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ರಂದು 24 ಗಂಟೆಗಳ ಉಪವಾಸವನ್ನು ಆಚರಿಸಿದರು, ಪ್ರಾರ್ಥನೆ ಸಲ್ಲಿಸಿದರು ಮತ್ತು ಚರಕದಿಂದ ಖಾದಿ ನೂಲುಗಳನ್ನು ನೇಯ್ದು ಆ ದಿನವನ್ನು ಕಳೆದರು.
ಈ ನಡುವೆ , ಉಭಯ ರಾಷ್ಟ್ರಗಳು ವಿಭಜನೆಯಾದ ನಂತರ ಕೋಮು ಹಿಂಸಾಚಾರ ನಡೆದು ಒಂದು ಮಿಲಿಯನ್ ಸಾವುಗಳಿಗೆ ಕಾರಣವಾಯಿತು. ಉಪಖಂಡದ ಹಲವಾರು ಸ್ಥಳಗಳಲ್ಲಿ ಘರ್ಷಣೆಗಳು ಭುಗಿಲೆದ್ದವು. ಬಂಗಾಳದ ಜನರು ಮತ್ತು ಮುಖಂಡರಿಂದ ಪದೇ ಪದೇ ಮನವಿಗಳನ್ನು ಸ್ವೀಕರಿಸಿದ ಮಹಾತ್ಮ ಗಾಂಧೀಜಿ ಪಶ್ಚಿಮ ಬಂಗಾಳದ(ಈಗಿನ ಬಾಂಗ್ಲಾದೇಶವೂ ಸೇರಿ) ಗಲಭೆ ಪೀಡಿತ ನಗರಕ್ಕೆ ಶಾಂತಿ ತರುವ ಪ್ರಯತ್ನದಲ್ಲಿ ಪ್ರಯಾಣಿಸಿದ್ದರು. ಮುಸ್ಲಿಮರೇ ಬಹುಸಂಖ್ಯೆಯಲ್ಲಿದ್ದ ಹೈದೇರಿ ಮಂಜಿಲ್ ಎಂಬ ಪ್ರದೇಶದಲ್ಲಿ ಗಾಂಧೀಜಿ ಕೆಲ ದಿನ ತಂಗಿದ್ದರು.

ಆ ಸಂದರ್ಭದಲ್ಲಿ ಅವರನ್ನು ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯಲ್ಲಿ ನೀವು ಏಕೆ ಭಾಗಿಯಾಗುತ್ತಿಲ್ಲ ಎಂದು ಕೇಳಿದಾಗ ಗಾಂಧೀಜಿ ದೇಶ ವಿಭಜನೆಯಾದ ದಿನವನ್ನು ನಾನು ಸಂಭ್ರಮಿಸಲು ಸಾಧ್ಯವಿಲ್ಲ. ಆದರೆ ನಾನು ಉಳಿದವರು ಸಂತೋಷಪಡಬಾರದು ಎಂದು ಹೇಳುವುದಿಲ್ಲ. ದುರದೃಷ್ಟವಶಾತ್ ನಮಗೆ ಇಂದು ಸಿಕ್ಕಿರುವ ಸ್ವಾತಂತ್ರ್ಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ಭವಿಷ್ಯದ ಸಂಘರ್ಷದ ಬೀಜಗಳನ್ನು ಸಹ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ದೇಶ ಎದುರಿಸಬಹುದಾದ ಸಂಘರ್ಷಗಳನ್ನು ನೆನೆದು ಆತಂಕಿತನಾಗಿದ್ದೇನೆ ಎಂದು ಉತ್ತರಿಸಿದರು. ಈ ದಿನವನ್ನು ನಾನು ಉಪವಾಸವಿದ್ದು, ಚರಕದಲ್ಲಿ ನೂಲು ನೇಯ್ದು ಪ್ರಾರ್ಥನೆಯೊಂದಿಗೆ ಆಚರಿಸುತ್ತೇನೆ ಎಂದು ಗಾಂಧೀಜಿ ಹೇಳಿದ್ದರು.








