ಕೋವಿಡ್ ಸಂಕಷ್ಟ – ಅದ್ಧೂರಿ ಗಣಪತಿ ಹಬ್ಬ, ಮೊಹರಂ ಆಚರಣೆಗೆ ಬ್ರೇಕ್..!
ಬೆಂಗಳೂರು: ಕೊರೊನಾ ಹಾವಳಿಯಿಂದಾಗಿ ಈ ಬಾರಿಯೂ ವಿಜೃಂಭಣೆಯ ಗೌರಿ ಗಣೇಶ ಹಬ್ಬದ ಆಚರಣೆ ಹಾಗೂ ಮೊಹರಂ ಸೇರಿದಂತೆ ವಿವಿಧ ಧಾರ್ಮಿಕ ಹಬ್ಬಗಳ ಆಚರಣೆಗೆ ಅಡಚಣೆ ಉಂಟಾಗಿದೆ. ಹಬ್ಬಗಳ ಆಚರಣೆಗೆ ಸರ್ಕಾರ ಮಾರ್ಗಸೂಚಿ ಪ್ರಕಟ ಮಾಡಿ ಆದೇಶ ಹೊರಡಿಸಿದೆ.
ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾ ಪೂಜೆ, ಮೊದಲಾದ ಹಬ್ಬಗಳನ್ನು ಆಚರಿಸುವಾಗ ಜನದಟ್ಟಣೆ ತಡೆಗಟ್ಟಲು ಕೆಲ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಈ ಆದೇಶದ ಜೊತೆ ರಾಜ್ಯದಲ್ಲಿ ಸಾಮಾಜಿಕ, ಕ್ರೀಡಾ, ರಾಜಕೀಯ, ಶೈಕ್ಷಣಿಕ, ಸಾಂಸ್ಕೃತಿಕ ಜನ ಗುಂಪುಗೂಡುವ ಕಾರ್ಯಕ್ರಮ ನಿಷೇಧಿಸಲಾಗಿದೆ.
ಗಣೇಶ ಚತುರ್ಥಿಯನ್ನು ಸರಳವಾಗಿ ದೇವಾಲಯದ ಒಳಗಡೆ ಮತ್ತು ಮನೆಯಲ್ಲಿ ಆಚರಿಸಬೇಕು. ಗಣೇಶ ಮೂರ್ತಿಯನ್ನು ತರುವಾಗ ಮತ್ತು ವಿಸರ್ಜಿಸುವಾಗ ಯಾವುದೇ ಮೆರವಣಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಗಣೇಶ ಮೂರ್ತಿಯನ್ನು ಮನೆಯಲ್ಲೇ ವಿಸರ್ಜಿಸುವುದು ಅಥವಾ ಸ್ಥಳೀಯ ಆಡಳಿತ ಸಂಸ್ಥೆ ಸೂಚಿಸುವ ಜಾಗದಲ್ಲಿ ವಿಸರ್ಜಿವುದು ಸೇರಿ ಇನ್ನೂ ಹಲವು ನಿಯಮಗಳನ್ನ ಜಾರಿಗೊಳಿಸಲಾಗಿದೆ..
ಇನ್ನೂ ಮೊಹರಂ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳನ್ನು/ ಪಂಜಾವನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ.
60 ವರ್ಷಕ್ಕಿಂತ ಮೇಲ್ಪಟ್ಟವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲೇ ಪ್ರಾರ್ಥನೆ ಮಾಡಬೇಕು. ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ಮಸೀದಿಯಲ್ಲಿ ಪಾರ್ಥನೆ ಮಾಡಬಹುದು. ಹೆಚ್ಚಿನ ಜನರು ಆಗಮಿಸಿದ್ದಲ್ಲಿ ಪಾಳಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬಹುದು ಎಂದು ತಿಳಿಸಲಾಗಿದೆ.