ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ನೀಡುತ್ತಾ..?
ಬೆಂಗಳೂರು : ಗಣೇಶ ಚತುರ್ಥಿಗೆ ದಿನಗಣನೆ ಶುರುವಾಗಿದೆ. ಕೊರೊನಾ ಹೊರತಾದ ಪರಿಸ್ಥಿತಿಯಾಗಿದ್ದರೇ ಇಷ್ಟೊತ್ತಿಗಾಗಲೇ ಗಣೇಶ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡುತ್ತಿರುತ್ತಿತ್ತು. ಆದ್ರೆ ಈ ಸಂಭ್ರಮಕ್ಕೆ ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಬ್ರೇಕ್ ಹಾಕಿದೆ.
ಆದ್ರೆ ಈ ಬಾರಿ ರಾಜ್ಯದಲ್ಲಿ ಗಣೇಶೋತ್ಸವಕ್ಕೆ ಕೊಂಚ ರಿಲ್ಯಾಕ್ಷೇಶನ್ ಕೊಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ರಾಜ್ಯ ಬಿಜೆಪಿ ಸರ್ಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಈಗಾಗಲೇ ನಿಷೇಧ ಹೇರಿದೆ. ಗಣೇಶೋತ್ಸವ ಹಬ್ಬ ಆಚರಣೆಗೆ ಸರ್ಕಾರ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದೆ. ಆದರೆ ಇದೀಗ ಮಾರ್ಗಸೂಚಿ ಪರಾಮರ್ಶೆ ಮಾಡಿ ಹಬ್ಬಕ್ಕೆ ರಿಲ್ಯಾಕ್ಸೇಶನ್ ಕೊಡುವ ಕುರಿತು ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅದರಲ್ಲೂ ಸಚಿವ ಸುನಿಲ್ ಕುಮಾರ್ ಅವರು ಈ ಬಗ್ಗೆ ಮಾತನಾಡಿ, ಸರ್ಕಾರ ನಿಷೇಧ ಹೇರಿದ್ದರೂ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಆಶಯ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಶಾಸಕ ಬಸನಗೌಡ ಪಾಟೀಲ್ ನಮಗೆ ಗುಂಡು ಹೊಡೆದರೂ ನಾವು ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಇತ್ತ ಶ್ರೀರಾಮಸೇನೆ ಕೂಡ ಈ ಬಾರಿ ಸಾರ್ವಜನಿಕ ಗಣೇಶ ಉತ್ಸವಕ್ಕೆ ಅವಕಾಶ ನೀಡಬೇಕು ಎಂದು ಒತ್ತಾತಿಸಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಹೀಗಾಗಿ ಗಣೇಶೋತ್ಸವ ಆಚರಣೆಗೆ ಹೊರಡಿಸಿರುವ ಮಾರ್ಗಸೂಚಿ ಬದಲಾವಣೆ ಮಾಡಿ ಸರ್ಕಾರ ಗಣೇಶೋತ್ಸವಕ್ಕೆ ಅವಕಾಶ ಕೊಡುತ್ತಾ ಎಂಬ ಪ್ರಶ್ನೆ ಎದ್ದಿದೆ.