ಮಂಗಳೂರು: ಮಂಗಳೂರಿನ ಕಾಟಿಪಳ್ಳ 3ನೇ ವಾರ್ಡ್ ನಲ್ಲಿ ಇಂದು ನೂತನವಾಗಿ ನಿರ್ಮಿಸಿದ ಅಜ್ಜಿಮನೆ ಅಂಗನವಾಡಿ ಕೇಂದ್ರವನ್ನು ಶಾಸಕರಾದ ಡಾ.ಭರತ್ ಶೆಟ್ಟಿ.ವೈ ಅವರು ಉದ್ಘಾಟಿಸಿದರು. ಉದ್ಘಾಟನಾ ಸಮಾರಮಭದ ಬಳಿಕ ಮಾತನಾಡಿದ ಭರತ್ ಅವರು MRPL ಸಂಸ್ಥೆಯು 25 ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಸುಸಜ್ಜಿತ ಅಂಗನವಾಡಿ ಕೇಂದ್ರವನ್ನು ನಿರ್ಮಿಸುವುದಕ್ಕಾಗಿ ತನ್ನ ಸಾಮಾಜಿಕ ಬದ್ಧತಾ ನಿಧಿಯಿಂದ ಅನುದಾನ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇದೇ ವೇಳೆ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಮತ್ತು ಮಹಿಳೆಯರಿಗೆ ಬೇರೆ ಬೇರೆ ಸೌಲಭ್ಯವನ್ನು ಕಲ್ಪಿಸಿಕೊಡುವ ಕೇಂದ್ರವಾಗಿ ಅಂಗನವಾಡಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಹೀಗಾಗಿ ಸುಸಜ್ಜಿತ ಅಂಗವಾಡಿ ಕೇಂದ್ರಗಳ ನಿರ್ಮಾಣ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಂತರ ಮಾತು ಮುಂದುವರೆಸಿದ ಶಾಸಕರು ಅಜ್ಜಿಮನೆ ಎಂಬ ನೂತನ ಪರಿಕಲ್ಪನೆಯ ಅಂಗನವಾಡಿಗಳು ಮಕ್ಕಳಿಗೆ ಹೆಚ್ಚಿನ ಜ್ಞಾನವನ್ನು ನೀಡುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಸೌಲಭ್ಯಗಳ್ನು ಬಳಸಿಕೊಂಡು ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ಈ ಕಾಮಗಾರಿಗೆ ಸುಮಾರು 25 ಲಕ್ಷ ರೂಪಾಯಿ ವೆಚ್ಚ ತಗುಲಿದ್ದು, ಸುಸಜ್ಜಿತ ಕಟ್ಟಡದಲ್ಲಿ ಮಕ್ಕಳಿಗೆ ಆಟವಾಡಲು ಅಂಗಳ, ಮಲಗಲು ಕೋಣೆ, ಅಡಿಗೆ ಮನೆ, ಚಾವಡಿ, ಶೌಚಾಲಯ ಸೇರಿದಂತೆ ಅನೇಕ ವ್ಯವಸ್ಥೆಗಳಿವೆ.
ಇನ್ನೂ ಈ ಕಾರ್ಯಕ್ರಮದಲ್ಲಿ ಉಮಮೇಯರ್ ವೇದಾವತಿ, ಸ್ಥಳೀಯ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, ಶ್ರೀ ಮಹಾಗಣತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಬಾಲವಿಕಾಸ ಸಮಿತಿಯ ಅಧ್ಯಕ್ಷ ಸುಜಾತ, ನಿರ್ಮಿತಿ ಕೇಂದ್ರದ ಹಿರಿಯ ಕಾರ್ಯಕಾರಿ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಶಿಕ್ಷಣ ಇಲಾಖೆಯ ಶ್ಯಾಮಲಾ ಜಿ.ಕೆ, ಸಮಾಜ ಸೇವಕ ಕೂಸಪ್ಪ ಶೆಟ್ಟಿಗಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಕುಮಾರ್ ಕೋಡಿಕಲ್, ನಿಕಟಪೂರ್ವ ಕಾರ್ಪೋರೇಟರ್ ಬಶೀರ್ ಅಹಮ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.








