ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಹಣ ವಸೂಲಿ – ದುಡ್ಡು ನೀಡಲಾಗದೇ ಗಂಗಾ ನದಿಗೆ ಕೋವಿಡ್ ಸೋಂಕಿತರ ಶವಗಳನ್ನ ಎಸೆಯುತ್ತಿರುವ ಜನ
ದೇಶದಲ್ಲಿ ಕೊರೊನಾ 2 ನೇ ಅಲೆಯ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಆಕ್ಸಿಜನ್ ಕೊರತೆ ಬೆಡ್ ಕೊರತೆ , ಸರಿಯಾಗಿ ಚಿಕಿತ್ಸೆ ಸಿಗದೇ ನಿತ್ಯ ಸಾವಿರಾರು ಮಂದಿ ನರಳಿ ನರಳಿ ಪ್ರಾಣ ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶವಗಳನ್ನ ಹೂಳಲು , ಅಂತ್ಯಸಂಸ್ಕಾರಕ್ಕೂ ಜಾಗವಿಲ್ಲದಂತಹ ಕೆಟ್ಟ ಪರಿಸ್ಥಿತಿ ಉಲ್ಭಣಗೊಂಡಿದೆ..
ಇಂತಹ ಪರಿಸ್ಥಿತಿಯಲ್ಲೂ ಕೆಲವರು ದುಪ್ಪಟ್ಟು ದುಡ್ಡು ಗಳಿಸುವ ದುರಾಸೆಗೆ ಬಿದ್ದಿದ್ದು, ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದ ಅನೇಕ ಮಂದಿ ಶವಗಳನ್ನು ಪವಿತ್ರ ಗಂಗಾ ನದಿಯಲ್ಲಿ ಎಸೆಯುತ್ತಿರುವುದು ಕಂಡುಬಂದಿದೆ.
ಅಂತ್ಯಕ್ರಿಯೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಹಿನ್ನಲೆ ಕುಟುಂಬಸ್ಥರು ಸೋಂಕಿತರ ಮೃತದೇಹವನ್ನು ಗಂಗಾ ನದಿಗೆ ಬಿಡುತ್ತಿದ್ದಾರೆ. ಬಿಹಾರದ ಬುಕ್ಸರ್ ಗ್ರಾಮದ ಗಂಗಾ ನದಿ ತಟದಲ್ಲಿ 150ಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಿದ್ದು, ಇದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಪೂರ್ವದ ಗಡಿಗೆ ಹೊಂದಿಕೊಂಡಿರುವ ಬಕ್ಸಾರ್ನ ಚೌಸಾ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ.
ನದಿಯಲ್ಲಿ 30 ರಿಂದ 40 ಹೆಣಗಳು ತೇಲುತ್ತಿದ್ದು, ಬೀದಿನಾಯಿಗಳು ತಟದಲ್ಲಿಯೇ ಅಲೆಯುತ್ತಿವೆ. ಇದರಲ್ಲಿ ಅನೇಕ ಶವಗಳು ಕೋವಿಡ್ ಸೋಂಕಿತರದ್ದು ಎಂದು ಸಾಮಾಜಿಕ ಹೋರಾಟಗಾರ ಮತ್ತು ಸ್ಥಳೀಯ ವಕೀಲ ಅಶ್ವಿನ್ ವರ್ಮ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಶವಸಂಸ್ಥಾರದ ದುಬಾರಿ ವೆಚ್ಚದಿಂದ ಬಡವರು ಶವಗಳನ್ನು ನದಿಗೆ ತೇಲಿಬಿಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶವ ಸಂಸ್ಕಾರಕ್ಕೆ 30 ರಿಂದ 40 ಸಾವಿರವನ್ನು ಕೇಳುತ್ತಿದ್ದಾರೆ. ಇದು ಬಡವರಿಗೆ ಬಲು ಹೊರೆಯಾಗಿದ್ದು, ವಿಧಿಯಿಲ್ಲದೇ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಶವಗಳನ್ನು ಬೀದಿ ನಾಯಿಗಳು ಒಂದು ವೇಳೆ ತಿಂದರೆ ಅವುಗಳಿಗೂ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ.
ಸ್ಥಳೀಯ ಅಧಿಕಾರಿಗಳು ಅನಧಿಕೃತವಾಗಿ ಇವು ಸೋಂಕಿತರ ಮೃತದೇಹಗಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.