ಇದು ಸೌರವ್ ಗಂಗೂಲಿಯವರ ಡ್ರೀಮ್ ಟೀಮ್…!
ಹಾಲಿ ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಯವರು ತನ್ನ ಕನಸಿನ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಮಯಾಂಕ್ ಅಗರ್ವಾಲ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಆಟಗಾರರ ಹೆಸರುಗಳನ್ನು ಹೇಳಿದ್ದಾರೆ.
ಅಂದ ಹಾಗೇ ಗಂಗೂಲಿಯವರ ಡ್ರೀಮ್ ಟೀಮ್ಗೆ ನಾಯಕ ಸ್ವತಃ ಸೌರವ್ ಗಂಗೂಲಿಯವರೇ. ಹಾಗೇ ಹಾಲಿ ತಂಡದಲ್ಲಿರುವ ಐವರು ಆಟಗಾರರನ್ನು ಅವರ ಕನಸಿನ ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ಅಚ್ಚರಿ ಅಂದ್ರೆ ಗಂಗೂಲಿ ಟೀಮ್ ನಲ್ಲಿ ಸೆಹ್ವಾಗ್, ಯುವರಾಜ್ ಸಿಂಗ್ ಸ್ಥಾನ ಪಡೆದುಕೊಂಡಿಲ್ಲ. ಬದಲಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ, ಆರ್ . ಅಶ್ವಿನ್, ಮಹಮ್ಮದ್ ಸಮಿ ಹಾಗೂ ಮಹೇಂದ್ರ ಸಿಂಗ್ ಧೋನಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇನ್ನುಳಿದಂತೆ ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಮತ್ತು ಜಹೀರ್ ಖಾನ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಹಾಗೇ ಗಂಗೂಲಿ ಈ ಆಟಗಾರರನ್ನು ನಾನು ಯಾಕೆ ಆಯ್ಕೆ ಮಾಡಿಕೊಂಡಿದ್ದೇನೆ ಎಂಬುದರ ಬಗ್ಗೆಯೂ ವಿವರಿಸಿದ್ದಾರೆ.
ಸೌರವ್ ಗಂಗೂಲಿ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕ. 2000ದಿಂದ 2005ರವರೆಗೆ ಟೀಮ್ ಇಂಡಿಯಾದ ಸಾರಥಿಯಾಗಿದ್ದರು ಸೌರವ್ ಗಂಗೂಲಿ. ಅಷ್ಟೇ ಅಲ್ಲ, ಗಂಗೂಲಿ ಯಶಸ್ಸಿ ಟೆಸ್ಟ್ ನಾಯಕನೂ ಹೌದು. 45 ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಗಂಗೂಲಿ 21 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 55 ಪಂದ್ಯಗಳಲ್ಲಿ 33 ಪಂದ್ಯಗಳಲ್ಲಿ ಗೆಲುವು ಹಾಗೂ ಧೋನಿ 60 ಪಂದ್ಯಗಳಲ್ಲಿ 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ.
ಇನ್ನು ಕನಸಿನ ತಂಡದ ಬಗ್ಗೆ ಮಾತನಾಡಿದ್ದ ಗಂಗೂಲಿ, ನನ್ನ ಬಳಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಸ್ಪಿನ್ನರ್ಗಳಿದ್ರೆ, ಮೂರನೇ ಸ್ಪಿನ್ನರ್ ಆಗಿ ನಾನು ಆರ್. ಅಶ್ವಿನ್ ಅವರನ್ನು ಮಾಡಿಕೊಳ್ಳುತ್ತೇನೆ. ಅದೇ ರೀತಿ ರವೀಂದ್ರ ಜಡೇಜಾನ ಬಗ್ಗೆ ಒಲವಿದೆ. ಹಾಗೇ ಶ್ರೀನಾಥ್ ವಿದಾಯ ಹೇಳಿದ್ದ ನಂತರ ಟೀಮ್ ಇಂಡಿಯಾಗೆ ಮಹಮ್ಮದ್ ಸಮಿಯಂತಹ ಬೌಲರ್ ಸಿಕ್ಕಿದ್ದಾರೆ ಎಂದು ಅವರು ಹೇಳಿದ್ರು.
ಸೌರವ್ ಗಂಗೂಲಿ ಡ್ರೀಮ್ ಟೀಮ್
ಸೌರವ್ ಗಂಗೂಲಿ (ನಾಯಕ), ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಮಹೇಂದ್ರ ಸಿಂಗ್ ಧೋನಿ, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್, ಜಹೀರ್ ಖಾನ್, ಆರ್. ಅಶ್ವಿನ್, ಜಸ್ಪ್ರಿತ್ ಬೂಮ್ರಾ, ಮಹಮ್ಮದ್ ಸಮಿ.