ಕೊರೊನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಮಂದಿರಗಳು,ಮಲ್ಟಿಫ್ಲೆಕ್ಸ್ ಗಳು ಮುಚ್ಚಿದ್ದು, ಅಂತರ್ಜಾಲದ ಮೂಲಕ ಸಿನಿಮಾ, ನಾಟಕ ಹಾಗೂ ವಿವಿಧ ಕಾರ್ಯಕ್ರಮಗಳ ಮುಂಗಡ ಟಿಕೆಟ್ ಕಾಯ್ದಿರಿಸುವ ಕಂಪೆನಿ ಬುಕ್ ಮೈ ಶೋ ಆರ್ಥಿಕ ಸಂಕಷ್ಟದ ಕಾರಣದಿಂದ 270 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂದಿನ ದಿನಗಳಲ್ಲಿ ಕೊರೊನಾದಿಂದ ಮತ್ತಷ್ಟು ಆದಾಯ ಕಡಿಮೆಯಾಗುವ ನಿರೀಕ್ಷೆಯೊಡನೆ ಸಂಸ್ಥೆ ಈ ತೀರ್ಮಾನ ತೆಗೆದುಕೊಂಡಿದೆ ವರದಿಗಳು ತಿಳಿಸಿವೆ. ಮೂಲಕ ಓಲಾ, ಉಬರ್, ಜೊಮಾಟೋ, ಸ್ವಿಗ್ಗಿ ಸೇರಿದಂತೆ ಹಲವಾರು ಟೆಕ್-ಆಧಾರಿತ ಸಂಸ್ಥೆಗಳ ಸಾಲಿಗೆ ಬುಕ್ ಮೈಶೋ ಕೂಡ ಸೇರಿದೆ.
ಈ ಬಗ್ಗೆ ಬುಕ್ ಮೈಶೋ ಮುಖ್ಯ ಕಾರ್ಯನಿರ್ವಾಹಕ ಆಶಿಶ್ ಹೆಮ್ರಾಜನಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಈ ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ. “ಮುಂದಿನ ತಿಂಗಳುಗಳಲ್ಲಿ ಆದಾಯ ಇನ್ನಷ್ಟು ತಗ್ಗಲಿದೆ ಎಂದು ನಾವು ನಂಬುವ ಕಾರಣ ಹೊಂದಾಣಿಕೆ ಮಾಡಲು ನಮ್ಮ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯವನ್ನು ನಾವು ಮಾಡಲೇಬೇಕಿದೆ. ಭಾರತದ ಮತ್ತು ಜಾಗತಿಕವಾಗಿ ಬುಕ್ ಮೈಶೋನಲ್ಲಿ 1,450 ಉದ್ಯೋಗಿಗಳ ಪೈಕಿ ವಿವಿಧ ಹಂತದಲ್ಲಿ ಕೆಲಸ ಮಾಡುವ ಸುಮಾರು 270 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ ಎಂದಿದ್ದಾರೆ.
ಭಾರತ ಹಾಗೂ ವಿವಿಧೆಡೆ ಬುಕ್ ಮೈ ಶೋ ಕಂಪೆನಿಯಲ್ಲಿ ಸುಮಾರು 1,450 ಮಂದಿ ನೌಕರರಿದ್ದು, ಅವರಲ್ಲಿ ಸುಮಾರು 270 ಮಂದಿಯಲ್ಲಿ ಕೆಲವರು ಸಂಪೂರ್ಣವಾಗಿ ಕೆಲಸ ಕಳೆದುಕೊಂಡಿದ್ದರೆ, ಇನ್ನು ಅನೇಕರನ್ನು ಫರ್ಲೋದಲ್ಲಿ ಇರಿಸಲಾಗಿದೆ. ಅಂದರೆ ಅನೇಕ ಉದ್ಯೋಗಿಗಳು ಕಂಪೆನಿಯ ಉದ್ಯೋಗಿಗಳಾಗಿಯೇ ಉಳಿಯಲಿದ್ದು, ಅವರಿಗೆ ವೇತನ ಸಿಗುವುದಿಲ್ಲ. ಆದರೆ ಎಲ್ಲ ವೈದ್ಯಕೀಯ ವಿಮೆ, ಗ್ರಾಚುಯಿಟಿ ಮತ್ತು ಇತರೆ ಸವಲತ್ತುಗಳು ಮುಂದುವರಿಯಲಿದೆ.