ಅರವಿಂದ್ ಕೇಜ್ರಿವಾಲ್ ಅವರನ್ನು ‘ತುಘಲಕ್’ ಎಂದು ಕರೆದ ಗೌತಮ್ ಗಂಭೀರ್
ಹೊಸದಿಲ್ಲಿ, ಜುಲೈ 12: ದೆಹಲಿಯ ಕೋವಿಡ್ -19 ಸುಧಾರಣೆಯ ಸಂಪೂರ್ಣ ಕ್ರೆಡಿಟ್ ತಾನೇ ಪಡೆದು ಕೊಳ್ಳಲು ದೆಹಲಿ ಮುಖ್ಯಮಂತ್ರಿ ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿರುವ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ‘ತುಘಲಕ್’ ಎಂದು ಕರೆದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಗೌತಮ್ ಗಂಭೀರ್,
ದೆಹಲಿಯಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆ ಕಾಣುತ್ತಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಚೇತರಿಕೆ ಪ್ರಮಾಣ ಹೆಚ್ಚಿದೆ . ಎಲ್ಲವನ್ನೂ ತಾವೇ ನಿಭಾಯಿಸುತ್ತಿದ್ದೇವೆ ಎಂದು ಕ್ರೆಡಿಟ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ
ತುಘಲಕ್ ಅರವಿಂದ್ ಕೇಜ್ರಿವಾಲ್ ಹಾಗೂ ಆಪ್ ಪಕ್ಷ ಪ್ರತಿ ತಾಸಿಗೊಮ್ಮೆ ದೆಹಲಿಯ ಕೊವಿಡ್-19 ಪರಿಸ್ಥಿತಿಯ ಬಗ್ಗೆ ವಿವರಿಸಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಲವು ದಿನಗಳ ಹಿಂದೆ ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5.5 ಲಕ್ಷಕ್ಕೆ ಏರಲಿದೆ ಎಂದು ಉಪಮುಖ್ಯಮಂತ್ರಿಯವರು ಯಾವ ಕಾರಣಕ್ಕಾಗಿ ಹೇಳಿದರು? ಕೇಂದ್ರ ನೆರವಿಗೆ ಬರಲಿ ಎಂದು ಅವರು ಹೀಗೆ ಹೇಳಿಕೆ ನೀಡಿರುವುದೇ ? ಎಂದು ಗೌತಮ್ ಗಂಭೀರ್ ಪ್ರಶ್ನಿಸಿದರು.
ಈ ಮೊದಲು ರಾಜ್ಯದಲ್ಲಿ ಕೊರೊನಾ ವಿರುದ್ಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 84, 694 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ(ಎಎಪಿ) ಟ್ವೀಟ್ ಮಾಡಿತ್ತು.
ಕೊರೊನಾ ಸೋಂಕಿನಿಂದ ತತ್ತರಿಸಿದ್ದ ದೆಹಲಿಯಲ್ಲಿ ಈಗ ಪರಿಸ್ಥಿತಿ ಸುಧಾರಣೆ ಕಾಣುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಸೋಂಕಿನಿಂದ ಚೇತರಿಕೆ ಕಾಣುತ್ತಿರುವವರ ಪ್ರಮಾಣವೂ ಹೆಚ್ಚಾಗುತ್ತಿದೆ.








