ವಿರಾಟ್, ರೋಹಿತ್ ಗಿಂತ ಕೆ.ಎಲ್.ರಾಹುಲ್ ಬೆಸ್ಟ್ : ಗಂಭೀರ್
ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಒಂಟಿ ಸಲಗದಂತೆ ಹೋರಾಡಿ ಬಲಿಷ್ಠ ಚೆನ್ನೈ ವಿರುದ್ಧ ಗೆಲುವಿನ ಕೇಕೆ ಹಾಕಿದರು.
ಅದರಲ್ಲೂ 42 ಎಸೆತಗಳಲ್ಲಿ ಅಜೇಯ 98 ರನ್ ಗಳಿಸಿದ ರಾಹುಲ್ ಆಟಕ್ಕೆ ಹಿರಿಯ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ರಾಹುಲ್ ಸಾಮರ್ಥ್ಯವನ್ನು ಹಾಡಿಹೊಗಳುತ್ತಿದ್ದಾರೆ.
ಅದರಂತೆ ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್, ಕೆ.ಎಲ್.ರಾಹುಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗಿಂತ ಕೆ.ಎಲ್.ರಾಹುಲ್ ಬಳಿ ಹೆಚ್ಚಿನ ಸಾಮರ್ಥ್ಯವಿದೆ ಎಂದಿದ್ದಾರೆ.
ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಗಂಭೀರ್, ರಾಹುಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದ್ದಾರೆ.
ಐಪಿಎಲ್ ಅಭಿಯಾನದ ಉದ್ದಕ್ಕೂ ಅವರ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿತ್ತು. ಅವರು ಇತರೆ ಬ್ಯಾಟ್ಸ್ ಮೆನ್ ಗಳಿಂತ ಅದ್ಭತವಾಗಿ ಬ್ಯಾಟ್ ಬೀಸುತ್ತಾರೆ ಎಂದಿದ್ದಾರೆ.
ಅಲ್ಲದೆ ರಾಹುಲ್ ಗೆ ಸಲಹೆ ನೀಡಿರುವ ಗೌತಿ, ಆಟವಾಡಿ, ಭಾರತದಲ್ಲಿ ಮಾತ್ರವಲ್ಲ, ನಿಮ್ಮ ಸಾಮರ್ಥ್ಯವನ್ನ ಇಡೀ ಪ್ರಪಂಚಕ್ಕೆ ತೋರಿಸಿ. ಜನರು ರೋಹಿತ್, ವಿರಾಟ್ ಬಗ್ಗೆ ಮಾತನಾಡುವಾಗ ಖಂಡಿತವಾಗಿ ನಿಮ್ಮ ಹೆಸರು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.









