ದೇಶದ ಸೇನಾಪಡೆಯಲ್ಲಿ ಮೊದಲ ಬಾರಿಗೆ ಯೋಧರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಯೋಧರ ರಜೆಯನ್ನು ರದ್ದುಗೊಳಿಸಿ, ಸೋಂಕು ಎದುರಿಸಲು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದೆ.
ಕೇಂದ್ರ ಸರಕಾರ ಸಿ.ಆರ್.ಪಿ.ಎಫ್, ಬಿ.ಎಸ್.ಎಫ್, ಸಿ.ಐ.ಎಸ್.ಎಫ್, ಐಟಿಬಿಪಿ, ಸಶಸ್ತ್ರ ಸೀಮಾ ಬಲ(ಎಸ್.ಎಸ್.ಬಿ), ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ ಮತ್ತು ಅಸ್ಸಾಂ ರೈಫಲ್ಸ್ ಗಳ ಯೋಧರ ರಜೆಯನ್ನು ರದ್ದುಗೊಳಿಸಿದ್ದು, ಕೊರೊನಾ ಸೋಂಕಿನ ವಿರುದ್ಧ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ಸೂಚಿಸಿದೆ.
ಈಗಾಗಲೇ ಲೇಹ್ ಜಿಲ್ಲೆಯ ಚೌಹಟ್ ಗ್ರಾಮಕ್ಕೆ ಸೇರಿದ ಯೋಧನಿಗೆ ಆತನ ರಜಾ ದಿನದಲ್ಲಿ ಇರಾನ್ ಗೆ ತೀರ್ಥಯಾತ್ರೆ ಕೈಗೊಂಡು ಊರಿಗೆ ವಾಪಸಾಗಿದ್ದ ಕೊರೋನಾ ಸೋಂಕಿತ ತಂದೆಯಿಂದ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಯೋಧನ ಸಹೋದರನಿಗೆ ಕೂಡ ಸೋಂಕು ತಗುಲಿರುವುದು ದೃಢಪಟ್ಟಿದೆ.
ಪುಣೆಯಲ್ಲಿರುವ ಮಿಲಿಟರಿ ಎಂಜಿನಿಯರಿಂಗ್ ಅಧಿಕಾರಿಗೆ ಕೂಡ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ. ಅಲ್ಲದೆ ಅದೇ ಸಂಸ್ಥೆಯ ಮತ್ತೊಬ್ಬ ಅಧಿಕಾರಿಯ ಪತ್ನಿಗೂ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್, ವಿಮಾನ ರೈಲು ಪ್ರಯಾಣ ಬೇಡವೆಂದು ಯೋಧರಿಗೆ ಸೂಚಿಸಿರುವ ಕೇಂದ್ರ ಸರಕಾರ, ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ಮುಂದೂಡುವಂತೆ ಸೂಚಿಸಿದೆ. ಯೋಧರ ಕುಟುಂಬ ಸದಸ್ಯರಿಗೂ ಅನಗತ್ಯವಾಗಿ ಹೊರಗೆ ಬರದಂತೆ ಸೂಚಿಸಿರುವ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸಂದೇಶಗಳನ್ನು ನಂಬದಂತೆ ಕೇಳಿಕೊಂಡಿದೆ.