ಗಿಲ್.. ಸಂಜು ಸ್ಯಾಮ್ಸನ್ ನಡುವಿನ ಗುದ್ದಾಟ.. ಜೈಸ್ವಾಲ್ – ವೈಭವ್‍ಗೆ ಚಾನ್ಸ್ ಸಿಗುತ್ತಾ..?
ಟೀಮ್ ಇಂಡಿಯಾ ಮನೆಯೊಂದು ಮೂರು ಬಾಗಿಲು ಆಗುತ್ತಿರುವುದಕ್ಕೆ ಕಾರಣ ಯಾರು..?
ಸ್ಕೈ ಗ್ಯಾಂಗ್‍ನಲ್ಲಿ ಇಷ್ಟೊಂದು ಭಿನ್ನಾಭಿಪ್ರಾಯ ಮೂಡಲು ಪ್ರಮುಖ ವಿಷ್ಯವಾದ್ರೂ ಏನು..?
ಟೀಮ್ ಇಂಡಿಯಾ ಎಡುವುತ್ತಿರುವುದು ಎಲ್ಲಿ..?
202ರ ಟಿ-20 ವಿಶ್ವಕಪ್ ಟೂರ್ನಿಗೆ ರೆಡಿಯಾಗೋದು ಯಾವಾಗ..?
ಪ್ರತಿಷ್ಠಿತ ಟೂರ್ನಿ ಸಮೀಪಿಸುತ್ತಿರುವುದಂತೆ ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಗೊಂದಲ ಯಾಕೆ..?
ಹೀಗೆ ಮುಂದುವರಿದ್ರೆ ಟಿ-20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡೋದು ಹೇಗೆ..?
ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಒಂದೇ ಒಂದು ಹೆಸರು… ಅದು ಹೆಡ್‍ಕೋಚ್ ಗೌತಮ್ ಗಂಭೀರ್.
ಹೌದು, ಗಂಭೀರ್ ಹೆಡ್ ಕೋಚ್ ಆದ ಬಳಿಕ ಸತತ ಟೀಕೆಗಳೇ ಕೇಳಿಬರುತ್ತಿವೆ. ಕ್ರಿಕೆಟ್ ಪಂಡಿತರು, ಮಾಜಿ ಕ್ರಿಕೆಟಿಗರು ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಗಂಭೀರ್ ವಿರುದ್ಧ ಸತತವಾಗಿ ಟೀಕಾಸ್ತ್ರಗಳ ಪ್ರಹಾರವೇ ನಡೆಯುತ್ತಿದೆ.
ಅದಕ್ಕೆ ಕಾರಣ ಗೌತಮ್ ಗಂಭೀರ್ ನಡೆ. ಯಾರು ಏನೇ ಅನ್ನಲಿ.. ನಾನು ಇರೋದೇ ಹೀಗೆ.. ನನ್ನ ತಂಡ ಹೀಗೆ ಇರುತ್ತೆ.. ಹೀಗೆ ಇರಬೇಕು ಎಂಬ ಸರ್ವಾಧಿಕಾರಿ ಧೋರಣೆಯೇ ಗಂಭೀರ್‍ಗೆ ಮುಳುವಾಗುತ್ತಿದೆಯಾ..? ಅಥವಾ ಸೀನಿಯರ್ – ಜ್ಯೂನಿಯರ್ ಆಟಗಾರರ ಮನ ಗೆಲ್ಲಲು ಗಂಭೀರ್ ವಿಫಲವಾಗುತ್ತಿದ್ದಾರಾ..? ಅಷ್ಟೇ ಅಲ್ಲ, ತಂಡದಲ್ಲಿರುವ ಕೆಲವು ಆಟಗಾರರು ಗಂಭೀರ್ ಮಾತನ್ನು ಕೇಳುತ್ತಿಲ್ವಾ..? ಎಲ್ಲರೂ ನನ್ನ ಮಾತು ಕೇಳಬೇಕು ಎಂಬ ಹಿಟ್ಲರ್ ಮನೋಭಾವನೆಯಾ..? ಆದ್ರೆ ತಂಡದೊಳಗೆ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ.. ಕೇವಲ ಊಹಾಪೋಹನಾ… ಯಾವುದು ಕೂಡ ಕ್ಲಾರಿಟಿ ಸಿಗುತ್ತಿಲ್ಲ.
ಆದ್ರೆ ಸದ್ಯದ ಟೀಮ್ ಇಂಡಿಯಾದ ಪರಿಸ್ಥಿತಿ ಚೌಚೌ ಬಾತ್‍ನಂತಿದೆ ಎಂಬುದು ಸುಳ್ಳಲ್ಲ. ಈ ಕಡೆ ಸಿಹಿನೂ ಇಲ್ಲ.. ಅತ್ತ ಖಾರನೂ ಇಲ್ಲ. ಸಿಹಿಯಾದಾಗ ಟೀಮ್ ಎಫರ್ಟ್.. ಖಾರ ಆದಾಗ ಹೆಡ್ ಕೋಚ್ ಸರಿ ಇಲ್ಲ ಅನ್ನೋ ಮಾತು. ಅದು ಏನೇ ಇರಲಿ, ಅದು ಯಾರೇ ಆಗಿರಲಿ..ಅಹಂ ಬಿಟ್ಟು ತಂಡದ ಹಿತವನ್ನು ಕಾಪಾಡಿಕೊಳ್ಳುವುದು ಮುಖ್ಯ. ಇಲ್ಲದೆ ಇದ್ರೆ ಭಾರತೀಯ ಕ್ರಿಕೆಟ್‍ಗೆ ಮತ್ತು ಅಭಿಮಾನಿಗಳಿಗೆ ಮಾಡುತ್ತಿರುವ ಮಹಾ ದ್ರೋಹ.
ಸದ್ಯ ಟೀಮ್ ಇಂಡಿಯಾದಲ್ಲಿ ಮುಖ್ಯ ಸಮಸ್ಯೆ ಇರೋದು ಬ್ಯಾಟಿಂಗ್ ಕ್ರಮಾಂಕದಲ್ಲಿ. ಅದರಲ್ಲೂ ಟಿ-20 ಕ್ರಿಕೆಟ್‍ನಲ್ಲಿ ಯಾರು ಇನಿಂಗ್ಸ್ ಆರಂಭಿಸಬೇಕು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪದೇ ಪದೇ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾವಣೆ ಮಾಡುತ್ತಿರೋದು ಯಾಕೆ ಎಂಬುದು ತಿಳಿಯುತ್ತಿಲ್ಲ. ಅಷ್ಟಕ್ಕೂ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡುವ ಅವಶ್ಯಕತೆಯಾದ್ರೂ ಏನಿದೆ..?
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪಾಟ್ನರ್ ಯಾರಾಗಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಕೆಲವರು ಸಂಜು ಸ್ಯಾಮ್ಸನ್‍ಗೆ ಅನ್ಯಾಯವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಶುಭ್ಮನ್ ಗಿಲ್ ಪರವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಈ ನಡುವೆ ಎಕ್ಸ್ ಫ್ಯಾಕ್ಟರ್ ಆಗಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಕಡೆ ಬೆರಳು ತೋರಿಸುತ್ತಿದ್ದಾರೆ. ಆದ್ರೆ ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್‍ಮೆಂಟ್ ಇದಕ್ಕೆ ಇನ್ನೂ ಕೂಡ ಉತ್ತರ ಹುಡುಕುತ್ತಿದೆ.
ಹಾಗೇ ನೋಡಿದ್ರೆ ಟೀಮ್ ಇಂಡಿಯಾದಲ್ಲಿ ಹೇಳಿಕೊಳ್ಳುವಂತಹ ಸಮಸ್ಯೆಗಳೇನೂ ಇಲ್ಲ. ಎಲ್ಲ ಸಮಸ್ಯೆ, ಗೊಂದಲಗಳನ್ನು ಸ್ವಯಂಕೃತವಾಗಿ ಮಾಡಿಕೊಂಡಿರೋದು. ಮುಖ್ಯವಾಗಿ ಟಿ-20ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜೊತೆ ಯಾರು ಇನಿಂಗ್ಸ್ ಆರಂಭಿಸಬೇಕು ಎಂಬುದು ಈಗ ಮುಖ್ಯ ಪ್ರಶ್ನೆ. ಒಂದು ವೇಳೆ ಶುಭ್ಮನ್ ಗಿಲ್ ಅದ್ಭುತವಾದ ಫಾರ್ಮ್‍ನಲ್ಲಿ ಇರುತ್ತಿದ್ರೆ ಈ ಪ್ರಶ್ನೆ ಉದ್ಭವ ಆಗುತ್ತಿರಲಿಲ್ಲ. ಹೀಗಾಗಿ ಸಂಜು ಸ್ಯಾಮ್ಸನ್‍ಗೆ ಅನ್ಯಾಯವಾಗುತ್ತಿದೆ ಎಂಬ ಧ್ವನಿ ಜೋರಾಗಿ ಕೇಳಿಬರುತ್ತಿದೆ.
ನಿಜ, ಹೇಳಬೇಕು ಅಂದ್ರೆ ಸಂಜುಗೆ ಅನ್ಯಾಯವಾಗಿದೆ. ಇದರಲ್ಲಿ ಎರಡು ಮಾತಿಲ್ಲ. ಸಂಜು ಪ್ರತಿಭೆಗೆ ಟೀಮ್ ಇಂಡಿಯಾದಲ್ಲಿ ಬೆಲೆ ಸಿಕ್ಕಿಲ್ಲ. ಒಂದು ವೇಳೆ ಸಂಜು ಮುಂಬೈ ಅಥವಾ ದೆಹಲಿ ತಂಡದಲ್ಲಿ ಆಡುತ್ತಿದ್ರೆ ಇವತ್ತು ಟೀಮ್ ಇಂಡಿಯಾದ ನಾಯಕನಾಗುತ್ತಿದ್ದ. ಆದ್ರೆ ಅಂತಹ ಅವಕಾಶಗಳು ಸಂಜುಗೆ ಸಿಗಲೇ ಇಲ್ಲ. ಗುರು ದ್ರಾವಿಡ್ ಆಗಲಿ, ರವಿಶಾಸ್ತ್ರಿಯೇ ಆಗಿರಲಿ, ಅನಿಲ್ ಕುಂಬ್ಳೆ, ಈಗೀನ ಕೋಚ್ ಗೌತಮ್ ಗಂಭೀರ್ ಕೂಡ ಸಂಜು ಸ್ಯಾಮ್ಸನ್‍ಗೆ ಹೆಚ್ಚು ಅವಕಾಶವನ್ನೇ ನೀಡಲಿಲ್ಲ. ಇದು ಯಾಕೆ ಎಂಬ ಪ್ರಶ್ನೆಗೆ ಉತ್ತರ ತಾರತಮ್ಯ.
ಓಕೆ.. ಟಿ-20 ಪಂದ್ಯದಲ್ಲಿ ಸಂಜುಗೆ ಆರಂಭಿಕ ಸ್ಥಾನ ಬೇಡ.. ಕನಿಷ್ಠ ವಿಕೆಟ್ ಕೀಪರ್ ಅವಕಾಶವನ್ನು ನೀಡಬಹುದಿತ್ತು. ಆದ್ರೆ ಟೀಮ್ ಮ್ಯಾನೇಜ್‍ಮೆಂಟ್ ಜಿತೇಶ್ ಶರ್ಮಾಗೆ ಚಾನ್ಸ್ ನೀಡಿದೆ. ಹಾಗೇ ನೋಡಿದ್ರೆ ಜಿತೇಶ್ ಶರ್ಮಾನಿಗಿಂತಲೂ ಸಂಜು ಪ್ರಬುದ್ಧ ಆಟಗಾರ. ಟೆಸ್ಟ್, ಏಕದಿನ ಬೇಡ. ಆದ್ರೆ ಟಿ-20 ಕ್ರಿಕೆಟ್‍ನಲ್ಲಿ ಸಂಜು ಇನ್ನೂ ಎಷ್ಟು ಉತ್ತಮ ಪ್ರದರ್ಶನ ನೀಡಬೇಕು..? ತಂಡದ 15ರ ಬಳಗದಲ್ಲಿ ಅವಕಾಶ ನೀಡುತ್ತೀರಿ.. ಆದ್ರೆ ಆಡುವ 11ರ ಬಳಗದಲ್ಲಿ ಅವಕಾಶ ಯಾಕಿಲ್ಲ. ಒಂದು ವೇಳೆ ಸಂಜುಗೆ ಅವಕಾಶ ಬೇಡ ಅಂದ ಮೇಲೆ ತಂಡಕ್ಕೆ ಆಯ್ಕೆ ಮಾಡುವುದಾದ್ರೂ ಯಾಕೆ..? ಯಾಕಂದ್ರೆ ಸಂಜು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಆದ್ರೆ ದಕ್ಷಿಣ ಭಾರತೀಯ ಎಂಬ ಕಾರಣಕ್ಕೆ ಅವಕಾಶ ನೀಡುವುತ್ತಿಲ್ವಾ..? ಇನ್ನು, ಪ್ರಸಿದ್ಧ ಕೃಷ್ಣ ಬಿಟ್ರೆ ಕರ್ನಾಟಕದಿಂದ ಕೆ.ಎಲ್. ರಾಹುಲ್ ಕೂಡ ಟಿ-20 ತಂಡದಿಂದ ದೂರ ಉಳಿದಿದ್ದಾರೆ. ಅದನ್ನು ಬಿಟ್ಟು ಕರ್ನಾಟಕದಿಂದ ಆ ಮಟ್ಟದ ಆಟಗಾರರು ರೂಪುಗೊಂಡಿಲ್ಲ ಎಂಬುದು ಬೇರೆ ವಿಚಾರ. ಒಟ್ಟಿನಲ್ಲಿ ಟೀಮ್ ಇಂಡಿಯಾದಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ್ರೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲ. ಆದ್ರೆ ಟೀಮ್ ಇಂಡಿಯಾ ಕಾಂಬಿನೇಷನ್ ಸರಿಪಡಿಸಿಕೊಳ್ಳಬೇಕು. ಅದಕ್ಕಿಂತ ಮೊದಲು ಅಹಂ ಮತ್ತು ನಾನು ಅನ್ನೋ ಮಾನೋಭಾವನೆಯನ್ನು ಬಿಡಬೇಕು. ಒಗ್ಗಟ್ಟಿನ ಮಂತ್ರ ಪಠಿಸಬೇಕು. ಹೊಂದಾಣಿಕೆ ಹಾಗೂ ಪಾರದರ್ಶಕತೆಯಿಂದ ತಂಡವನ್ನು ಆಯ್ಕೆ ಮಾಡಿದ್ರ್ರೆ ಟೀಮ್ ಇಂಡಿಯಾದಲ್ಲಿ ಯಾವುದೇ ಪ್ರಾಬ್ಲಮ್ ಇಲ್ಲ. ಯಾಕಂದ್ರೆ ಟೀಮ್ ಇಂಡಿಯಾದ ಟಿ-20 ತಂಡದಲ್ಲಿರೋದು ಬಿಸಿರಕ್ತದ ಹುಡುಗರು. ಅವರಿಗೆ ಬೇಕಾಗಿರೋದು ಸೂಕ್ತ ಮಾರ್ಗದರ್ಶನದ ಜೊತೆಗೆ ಆತ್ಮವಿಶ್ವಾಸ ತುಂಬೋದು. ಅದನ್ನು ಮಾಡಬೇಕಿರೋದು ಹೆಡ್ ಮಾಸ್ಟರ್ ಗೌತಮ್ ಗಂಭೀರ್. ಮೇಲ್ನೋಟಕ್ಕೆ ಆ ಕೆಲಸ ಆಗುತ್ತಿಲ್ಲ ಎಂಬುದು ಕಂಡುಬರುತ್ತಿದೆ. ಗಂಭೀರ್‍ಗೆ ಒಂದು ಮಾತು.. ಗಂಭೀರ್ ಅದ್ಭುತ ಕ್ರಿಕೆಟಿಗ. ಅಪ್ಪಟ ದೇಶ ಪ್ರೇಮಿ. ಆದ್ರೆ ಮುಂಗೋಪಿ.. ನೇರ ನಡೆಯ ವ್ಯಕ್ತಿ. ತನಗೆ ಅನ್ನಿಸಿದ್ದನ್ನು ಕಡ್ಡಿ ಮುರಿದಂಗೆ ಹೇಳುವ ವ್ಯಕ್ತಿತ್ವ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಆದ್ರೆ ಟೀಮ್ ಇಂಡಿಯಾ ವಿಷ್ಯ ಬಂದಾಗ ಎಲ್ಲರನ್ನು ಸಮದೂಗಿಸಿಕೊಂಡು ಹೋಗಬೇಕು. ಇದನ್ನು ಅರಿತುಕೊಂಡ್ರೆ ಎಲ್ಲವೂ ಒಳ್ಳೆಯದಾಗುತ್ತದೆ.
ಸನತ್ ರೈ








