ಟೀಮ್ ಇಂಡಿಯಾದ ಪ್ರಿನ್ಸ್ ಶುಭ್ಮನ್ ಗಿಲ್ ಚೊಚ್ಚಲ ದ್ವಿಶತಕ ದಾಖಲಿಸಿ ಹಲವು ದಾಖಲೆಗಳನ್ನು ಉಡೀಸ್ ಮಾಡಿದ್ದಾನೆ. ಪಟೌಡಿ, ಗವಾಸ್ಕರ್, ಸಚಿನ್, ದ್ರಾವಿಡ್, ಧೋನಿ, ವಿರಾಟ್ ಕೊಹ್ಲಿಯಯ ದಾಖಲೆಗಳು ಶುಭ್ಮನ್ ಗಿಲ್ ಅಳಿಸಿ ಹೋಗಿ ಶುಭ್ಮನ್ ಹೆಸರಿಗೆ ಅಂಟಿಕೊಂಡಿವೆ.
ತಂಡದ ಹಿತ, ನಾಯಕನ ಜವಾಬ್ದಾರಿ ಜೊತೆಗೆ ಮಾತಿಗೆ ತಪ್ಪದಂತೆ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ಕ್ರಿಕೆಟ್ ಜನಕರ ಎದುರು ದಿಟ್ಟ ಹೋರಾಟ ನಡೆಸಿರುವ ರೀತಿಗೆ ಸಲಾಂ ಅನ್ನಲೇಬೇಕು.
ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಶತಕದ ಸನೀಹದಲ್ಲಿ ಎಡವಿದ್ರೂ ಶುಭ್ಮನ್ ಗಿಲ್ ಮಾತ್ರ ತಾಳ್ಮೆ ಕಳೆದುಕೊಳ್ಳಲಿಲ್ಲ. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತಕ್ಕ ಉತ್ತರ ನೀಡಿದ ಗಿಲ್, ಬರ್ಮಿಂಗ್ ಹ್ಯಾಮ್‍ನಲ್ಲಿ ಚೊಚ್ಚಲ ದ್ವಿಶತಕ ದಾಖಲಿಸಿ ಹಲವು ದಾಖಲೆಗಳು ಧೂಳಿಪಟವಾಗಿವೆ.
ಅಂದ ಹಾಗೇ, 387 ಎಸೆತಗಳಲ್ಲಿ 269 ರನ್ ದಾಖಲಿಸಿರುವುದು ಸಾಮಾನ್ಯ ಸಂಗತಿಯಲ್ಲ. ಈ ಮೂಲಕ ಇಂಗ್ಲೆಂಢ್ ನೆಲದಲ್ಲಿ 1979ರಲ್ಲಿ ಗವಾಸ್ಕರ್ ದಾಖಲಿಸಿದ 221 ರನ್‍ಗಳ ದಾಖಲೆಯ ರನ್ ಗಿಲ್ ಹೆಸರಿಗೆ ಸದ್ದಿಲ್ಲದೆ ಸೇರಿಕೊಂಡಿದೆ.
ಅಷ್ಟೇ ಅಲ್ಲ, 250 ಪ್ಲಸ್ ರನ್ ಹೊಡೆದ ಭಾರತದ ಆರನೇ ಆಟಗಾರನಾಗಿ ಗಿಲ್ ಹೊರಹೊಮ್ಮಿದ್ದಾನೆ. ಈ ಹಿಂದೆ ಸೆಹ್ವಾಗ್ ನಾಲ್ಕು ಬಾರಿ 250 ರನ್ ಗಳಿಸಿದ್ದರು. ಬಳಿಕ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಕರುಣ್ ನಾಯರ್, ವಿರಾಟ್ ಕೊಹ್ಲಿ ಬಳಿಕ ಶುಭ್ಮನ್ ಗಿಲ್ ಟೆಸ್ಟ್ ಕ್ರಿಕೆಟ್‍ನಲ್ಲಿ 250 ಪ್ಲಸ್ ರನ್ ಹೊಡೆದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಜೊತೆಗೆ 2004ರಲ್ಲಿ ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯಾ ವಿರುದ್ಧ 241 ರನ್ ಗಳಿಸಿದ್ದ ದಾಖಲೆಯನ್ನು ಗಿಲ್ ಅಳಿಸಿ ಹಾಕಿದ್ದಾನೆ. ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧ ಡಬಲ್ ಸೆಂಚೂರಿ ದಾಖಲಿಸಿದ ಭಾರತದ ಆರನೇ ಬ್ಯಾಟ್ಸ್‍ಮೆನ್ ಕೂಡ ಹೌದು. ಇನ್ನು ನಾಯಕನಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ದ್ವಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಗಿಲ್ ಹೆಸರಿಗಿದೆ. ಈ ಹಿಂದೆ 2016ರಲ್ಲಿ ವಿರಾಟ್ ವೆಸ್ಟ್ ಇಂಡೀಸ್ ವಿರುದ್ಧ ದ್ವಿಶತಕ ದಾಖಲಿಸಿದ್ದರು.
ಇನ್ನೊಂದೆಡೆ ಇಂಗ್ಲೆಂಡ್ ವಿರುದ್ಧ ದ್ವಿಶತಕ ದಾಖಲಿಸಿದ್ದ ಮೊದಲ ಏಷ್ಯನ್ ಹಾಗೂ ಭಾರತದ ನಾಯಕ ಎಂಬ ಗೌರವೂ ಗಿಲ್ ಪಾಲಾಗಿದೆ. ಈ ಹಿಂದೆ 2011ರಲ್ಲಿ ಶ್ರೀಲಂಕಾದ ದಿಲ್ವಾನ್ ಇಂಗ್ಲೆಂಡ್ ವಿರುದ್ಧ 193 ರನ್ ಸಿಡಿಸಿದ್ದರು.
ಅಷ್ಟೇ ಅಲ್ಲ, ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ್ದ ನಾಲ್ಕನೇ ಆಟಗಾರನಾಗಿದ್ದಾನೆ ಗಿಲ್. ಈ ಹಿಂದೆ ಸಚಿನ್, ಸೆಹ್ವಾಗ್, ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದರು.
ಮತ್ತೊಂದೆಡೆ, ಭಾರತದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ದ್ವಿಶತಕ ದಾಖಲಿಸಿದ್ದ ಎರಡನೇ ಕಿರಿಯ ಆಟಗಾರ ಗಿಲ್. ಈ ಮುಂಚೆ ಪಟೌಡಿ, ಅಂದ್ರೆ 1964ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.








