ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಂ ವೈದ್ಯೆಯೊಬ್ಬರ ಹಿಜಾಬ್ ಸರಿಸಲು ಸೂಚಿಸಿದ ಘಟನೆ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದೆ. ಈ ಘಟನೆಯ ಕಾವು ಇನ್ನೂ ಆರದ ಬೆನ್ನಲ್ಲೇ, ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ಮುಖ್ಯಮಂತ್ರಿಯ ನಡೆಯನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನೀಡಿರುವ ಹೇಳಿಕೆ ಈಗ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಆಕೆ ನರಕಕ್ಕೆ ಹೋಗಲಿ, ನಿತೀಶ್ ಕುಮಾರ್ ಮಾಡಿದ್ದು ಸರಿ ಎಂದು ಗಿರಿರಾಜ್ ಸಿಂಗ್ ಅತ್ಯಂತ ಉಡಾಫೆಯ ಪ್ರತಿಕ್ರಿಯೆ ನೀಡಿದ್ದಾರೆ.
ಸೋಮವಾರ ಪಾಟ್ನಾದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಸಮಾರಂಭ ನಡೆದಿತ್ತು. ಈ ವೇಳೆ ಕೋಲ್ಕತ್ತಾ ಮೂಲದ ವೈದ್ಯೆ ನುಸ್ರತ್ ಪರ್ವೀನ್ ಅವರು ವೇದಿಕೆಗೆ ಬಂದಾಗ, ಸಿಎಂ ನಿತೀಶ್ ಕುಮಾರ್ ಅವರು ವೈದ್ಯೆಯ ಹಿಜಾಬ್ ಕಡೆಗೆ ಬೊಟ್ಟು ಮಾಡಿ ಅದನ್ನು ತೆಗೆಯುವಂತೆ ಸೂಚಿಸಿದ್ದರು. ಈ ಘಟನೆಯಿಂದ ಆಘಾತಕ್ಕೊಳಗಾದ ವೈದ್ಯೆ ತಮಗೆ ಸರ್ಕಾರಿ ಕೆಲಸವೇ ಬೇಡ ಎಂದು ನಿರ್ಧರಿಸಿದ್ದಾರೆ ಎಂಬ ವರದಿಗಳ ಬಗ್ಗೆ ಪತ್ರಕರ್ತರು ಗಿರಿರಾಜ್ ಸಿಂಗ್ ಅವರನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಗಿರಿರಾಜ್ ಸಿಂಗ್, ಆಕೆ ಕೆಲಸ ಸ್ವೀಕರಿಸಬೇಕೆ ಅಥವಾ ನಿರಾಕರಿಸಿ ನರಕಕ್ಕೆ ಹೋಗಬೇಕೆ ಎಂಬುದು ಆಕೆಯ ವೈಯಕ್ತಿಕ ನಿರ್ಧಾರ. ನಿತೀಶ್ ಕುಮಾರ್ ಅವರು ರಕ್ಷಕರಾಗಿ ವರ್ತಿಸಿದ್ದಾರೆಯೇ ಹೊರತು ಯಾವುದೇ ತಪ್ಪು ಮಾಡಿಲ್ಲ ಎಂದು ಪ್ರತಿಪಾದಿಸಿದರು.
ಇದು ಇಸ್ಲಾಮಿಕ್ ದೇಶವಲ್ಲ, ಇದು ಭಾರತ
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಮುಂದುವರಿದ ಗಿರಿರಾಜ್ ಸಿಂಗ್, ಯಾರಾದರೂ ಸರ್ಕಾರಿ ನೇಮಕಾತಿ ಪತ್ರವನ್ನು ಪಡೆಯಲು ಹೋದಾಗ ತಮ್ಮ ಮುಖವನ್ನು ತೋರಿಸುವುದು ಕಡ್ಡಾಯವಲ್ಲವೇ? ಇದು ಯಾವುದೋ ಇಸ್ಲಾಮಿಕ್ ದೇಶವಲ್ಲ. ಜನರು ಪಾಕಿಸ್ತಾನ ಮತ್ತು ಇಂಗ್ಲೆಂಡ್ ಬಗ್ಗೆ ಮಾತನಾಡುತ್ತಾರೆ, ಆದರೆ ನೆನಪಿರಲಿ ಇದು ಭಾರತ. ಇಲ್ಲಿ ಕಾನೂನಿನ ನಿಯಮವೇ ಅಂತಿಮ ಎಂದು ಗುಡುಗಿದರು.
ನಾವು ಪಾಸ್‌ಪೋರ್ಟ್ ಪಡೆಯುವಾಗ ಅಥವಾ ವಿಮಾನ ನಿಲ್ದಾಣಕ್ಕೆ ಹೋದಾಗ ನಮ್ಮ ಗುರುತು ದೃಢೀಕರಣಕ್ಕಾಗಿ ಮುಖವನ್ನು ತೋರಿಸುವುದಿಲ್ಲವೇ? ಹಾಗೆಯೇ ಮುಖ್ಯಮಂತ್ರಿಯ ಎದುರು ನೇಮಕಾತಿ ಪತ್ರ ಪಡೆಯುವಾಗ ಮುಖ ತೋರಿಸುವುದು ಕರ್ತವ್ಯ ಎಂದು ಅವರು ವಾದಿಸಿದರು.
ಗಿರಿರಾಜ್ ಸಿಂಗ್ ಅವರ ಈ ಹೇಳಿಕೆ ಮತ್ತು ನಿತೀಶ್ ಕುಮಾರ್ ಅವರ ವರ್ತನೆಯ ವಿರುದ್ಧ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರು ಕೆಂಡಾಮಂಡಲವಾಗಿದ್ದಾರೆ.
1. ಅಗ್ಗದ ಮತ್ತು ಕೊಳಕು ಮನಸ್ಥಿತಿ: ತಾರಿಕ್ ಅನ್ವರ್
ಬಿಹಾರದ ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ಅವರು ಸಚಿವರ ವಿರುದ್ಧ ಕಿಡಿಕಾರಿದ್ದು, ಇವರು ತೃತೀಯ ದರ್ಜೆಯ ಜನರು, ಇವರದ್ದು ಅತ್ಯಂತ ಅಗ್ಗದ ಮನಸ್ಥಿತಿ. ನಮ್ಮ ದೇಶದ ಜಾತ್ಯತೀತತೆಯ ಅರ್ಥ ಇವರಿಗೆ ತಿಳಿದಿಲ್ಲ. ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು. ನಿತೀಶ್ ಕುಮಾರ್ ಅವರ ಕೃತ್ಯ ನಾಚಿಕೆಗೇಡಿನ ಸಂಗತಿ ಎಂದು ಜರಿದರು.
2. ಬಾಯಿ ತೊಳೆಯಲು ಫಿನೈಲ್ ಬೇಕು: ಇಲ್ತಿಜಾ ಮುಫ್ತಿ
ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಅವರು ಗಿರಿರಾಜ್ ಸಿಂಗ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ ವ್ಯಕ್ತಿಯ ಕೊಳಕು ಬಾಯಿಯನ್ನು ಸ್ವಚ್ಛಗೊಳಿಸಲು ಫಿನೈಲ್ ಮಾತ್ರ ಕೆಲಸ ಮಾಡುತ್ತದೆ. ನಮ್ಮ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರ ಹಿಜಾಬ್ ಮತ್ತು ನಖಾಬ್‌ಗಳನ್ನು ಮುಟ್ಟಲು ಧೈರ್ಯ ಮಾಡಬೇಡಿ. ಮುಸ್ಲಿಂ ಮಹಿಳೆಯರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
3. ಇದು ವಸ್ತ್ರಾಪಹರಣವಿದ್ದಂತೆ: ಫೌಜಿಯಾ ಖಾನ್
ಎನ್‌ಸಿಪಿ ಸಂಸದೆ ಫೌಜಿಯಾ ಖಾನ್ ಪ್ರತಿಕ್ರಿಯಿಸಿ, ಮಹಿಳೆ ತನ್ನ ದೇಹವನ್ನು ಎಷ್ಟರ ಮಟ್ಟಿಗೆ ಮುಚ್ಚಿಕೊಳ್ಳಬೇಕು ಎಂಬುದು ಆಕೆಯ ಹಕ್ಕು. ಸಾರ್ವಜನಿಕವಾಗಿ ಹಿಜಾಬ್ ತೆಗೆಸುವುದು ಮಹಿಳೆಯ ವಸ್ತ್ರಾಪಹರಣ ಮಾಡಿದಂತೆ. ನಿತೀಶ್ ಕುಮಾರ್ ಕ್ಷಮೆ ಯಾಚಿಸುವ ಬದಲು ಸಮರ್ಥನೆಗೆ ಇಳಿದಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು.
4. ಮಾನಸಿಕ ಅಸ್ವಸ್ಥತೆ: ಇಮ್ರಾನ್ ಮಸೂದ್
ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು, ಗಿರಿರಾಜ್ ಸಿಂಗ್ ಅವರ ಹೇಳಿಕೆಗಳನ್ನು ನೋಡಿದರೆ ಅವರಿಗೆ ಮಾನಸಿಕ ಅಸ್ವಸ್ಥತೆಯಿದೆ ಎಂದು ತೋರುತ್ತದೆ ಎಂದು ಲೇವಡಿ ಮಾಡಿದ್ದಾರೆ.
ನನಗೇನೂ ಗೊತ್ತಿಲ್ಲ ಎಂದ ಆರೋಗ್ಯ ಸಚಿವರು
ಒಂದೆಡೆ ವಿವಾದ ಭುಗಿಲೆದ್ದಿದ್ದರೆ, ಮತ್ತೊಂದೆಡೆ ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು, ಘಟನೆಯಿಂದ ನೊಂದ ವೈದ್ಯೆ ನೇಮಕಾತಿ ಪತ್ರ ತಿರಸ್ಕರಿಸಿದ್ದಾರೆ ಎಂಬ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನಮ್ಮ ಮುಖ್ಯಮಂತ್ರಿಗಳು ಮಹಿಳಾ ಸಬಲೀಕರಣಕ್ಕಾಗಿ ಅಪಾರ ಶ್ರಮ ವಹಿಸಿದ್ದಾರೆ ಎಂದು ಅವರು ಸಿಎಂ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ನಡೆದ ಈ ಒಂದು ಘಟನೆ ಮತ್ತು ನಂತರದ ಸಮರ್ಥನೆಗಳು ಬಿಹಾರ ರಾಜಕೀಯದಲ್ಲಿ ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.








