ಹುಬ್ಬಳ್ಳಿ: ಆಟವಾಡಲು ಹೋದ ಮೂವರು ಬಾಲಕಿಯರ ಪೈಕಿ ಒರ್ವ ಬಾಲಕಿ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಗ್ಲಾಸ್‍ಹೌಸ್‍ನಲ್ಲಿ ನಡೆದಿದೆ.
ನೀರು ಸಂಗ್ರಹಕ್ಕೆ ತೆಗೆಯಲಾಗಿದ್ದ ಗುಂಡಿಯಲ್ಲಿ ಬಾಲಕಿ ಆಟವಾಡುತ್ತಿದ್ದ ವೇಳೆ ಗುಂಡಿಗೆ ಬಿದ್ದು ಬಾಲಕಿ ತ್ರಿಶಾ ಪರುಶುರಾಮ ಯರಂಗಳಿ ಸಾವನ್ನಪ್ಪಿದ್ದಾಳೆ.
ಹುಬ್ಬಳ್ಳಿ ನಗರದ ಇಂದಿರಾಗಾಂಧಿ ಗಾಜಿನ ಮನೆ ಉದ್ಯಾನದಲ್ಲಿ ಮೂವರು ಬಾಲಕಿಯರು ಆಟವಾಡುತ್ತಿದ್ದರು. ಈ ವೇಳೆ ಮೂವರೂ ಬಾಲಕಿಯರು ನೀರಿನ ಇಂಗು ಗುಂಡಿಗೆ ಬಿದ್ದಿದ್ದಾರೆ. ಕೂಡಲೇ ಸಮಯಪ್ರಜ್ಞೆ ಮೆರೆದ ಉದ್ಯಾನವನದ ಭದ್ರತಾ ಸಿಬ್ಬಂದಿ ಇಬ್ಬರು ಬಾಲಕಿಯರನ್ನು ರಕ್ಷಣೆ ಮಾಡಿದ್ದಾರೆ.
ಬಾಲಕಿ ತ್ರಿಶಾ, 4ನೇ ತರಗತಿ ಓದುತ್ತಿದ್ದಳು. ಹಮಾಲಿ ಕೆಲಸ ಮಾಡುತ್ತಿದ್ದ ಪರಶುರಾಮ ಎಂಬುವರ ಪುತ್ರಿ ತ್ರಿಶಾ, ತಮ್ಮ ಅಕ್ಕ ಕಾವ್ಯ, ತಂಗಿ ಕೃತಿಕಾ ಜತೆ ಉದ್ಯಾನವನಕ್ಕೆ ಆಟವಾಡಲು ತೆರಳಿದ್ದಳು. ಗುಂಡಿ ಬಳಿ ಆಟವಾಡುವಾಗ ಮೂವರೂ ಬಾಲಕಿಯರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಸುರೇಶ ಹೊರಕೇರಿ, ತಕ್ಷಣ ನೀರಿಗೆ ಜಿಗಿದು ಇಬ್ಬರು ಬಾಲಕಿಯರನ್ನು ರಕ್ಷಿಸಿದ್ದಾರೆ. ತ್ರಿಶಾಗಳನ್ನು ರಕ್ಷಿಸುವ ಹೊತ್ತಿಗೆ ನೀರಿನಲ್ಲಿ ಮುಳುಗಿದ್ದಳು ಎಂದು ಉಪನಗರ ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ತ್ರಿಶಾಗಳನ್ನು ನೀರಿನಿಂದ ಮೇಲಕ್ಕೆತ್ತಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟೊತ್ತಿಗಾಗಲೇ ಬಾಲಕಿ ಮೃತಪಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯರನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ ಸುರೇಶ್ ಅಂಗವಿಕಲರು. ಸ್ಮಾರ್ಟ್ ಸಿಟಿ ಕಂಪನಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕರ್ತವ್ಯ ಮುಗಿಸಿ ಪಾರ್ಕ್‍ನಲ್ಲಿ ಒಂದು ರೌಂಡ್ ಸುತ್ತು ಹಾಕಿಕೊಂಡು ಬರಲು ಹೋಗಿದ್ದರು. ಆಗ ಮೂವರು ಬಾಲಕಿಯರು ಗುಂಡಿಗೆ ಬಿದ್ದಿದ್ದರು. ಅವರ ತಲೆ ಮತ್ತು ಕೈ ಮಾತ್ರ ಕಾಣುತ್ತಿತ್ತು. ಈಜು ಬಾರದಿದ್ದರೂ ಗುಂಡಿಗೆ ಜಿಗಿದು ಇಬ್ಬರು ಬಾಲಕಿಯರನ್ನು ಮೇಲಕ್ಕೆ ಎತ್ತಿದ್ದಾರೆ. ಆದರೆ, ತ್ರಿಶಾ ನೀರಿನಾಳಕ್ಕೆ ಹೋಗಿದ್ದಳು. ಎಷ್ಟು ಹುಡುಕಿದರೂ ತ್ರಿಶಾ ಸಿಗಲಿಲ್ಲ ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.








