ಅಪ್ರಾಪ್ತೆ ಮೇಲೆ ಆಕೆಯ ಅಣ್ಣನಿಂದಲೇ ಅತ್ಯಾಚಾರ
ಶಿವಮೊಗ್ಗ : ಅಪ್ರಾಪ್ತೆ ಮೇಲೆ ಆಕೆಯ ದೊಡ್ಡಪ್ಪನ ಮಗ ಅತ್ಯಾಚಾರ ಎಸಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ.
ಅಪ್ರಾಪ್ತೆ, ಆಕೆಯ ತಾಯಿ ಕೂಲಿ ಮಾಡಿ ಜೀವನ ನಡೆಸುತ್ತಾ ಸಾಗರದಲ್ಲಿ ನೆಲೆಸಿದ್ದರು. ಸಾಗರ ತಾಲೂಕಿನ ಗ್ರಾಮವೊಂದರಲ್ಲಿ ಅಪ್ರಾಪ್ತೆಯ ದೊಡ್ಡಪ್ಪನ ಮನೆ ಇದ್ದು, ಅಲ್ಲಿಗೆ ಆಗಾಗ ಬಂದು ಹೋಗುತ್ತಿದ್ದರು. ಅದೇ ರೀತಿ ಕಳೆದ ಮೇ ತಿಂಗಳಿನಲ್ಲಿ ಅಪ್ರಾಪ್ತೆ ತನ್ನ ದೊಡ್ಡಪ್ಪನ ಮನೆಗೆ ಭೇಟಿ ನೀಡಿದ್ದು, ಮನೆಯಲ್ಲಿ ಯಾರೂ ಇಲ್ಲದೇ ಸಂದರ್ಭದಲ್ಲಿ ದೊಡ್ಡಪ್ಪನ ಮಗ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.
ಇನ್ನು ಇತ್ತೀಚೆಗೆ ಆ ಅಪ್ರಾಪ್ತೆ ತಾಯಿಯೊಂದಿಗೆ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗಿದ್ದು, ಸಂಬಂಧಿಕರಿಗೆ ವಿಚಾರ ಗೊತ್ತಾಗಿದೆ. ಕೂಡಲೇ ಅವರು ದಾವಣಗೆರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಗಳೂರಿನ ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಸಂಬಂಧ ಜಗಳೂರಿನ ಬಿಳಚೋಡು ಠಾಣೆಗೆ ದೂರು ನೀಡಲಾಗಿದೆ. ನಂತರ ಪ್ರಕರಣವನ್ನು ಸಾಗರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.









