ಸುಮಾರು ಎರಡು ದಶಕಗಳ ಕಾಲ ತಲೆಮರೆಸಿಕೊಂಡು ಇದೀಗ ಸಿಸಿಬಿ ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿ ಪೂಜಾರಿ ತನ್ನ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಒಳ್ಳೆ ಮೀನೂಟ, ಸ್ವಲ್ಪ ಡ್ರಿಂಕ್ಸ್ ಕೊಡಿ, ನಿಮಗೆ ಏನ್ ಬೇಕು ಹೇಳ್ತಿನಿ ಎಂಬ ಮನವಿ ಮುಂದೆ ಇಟ್ಟಿದ್ದಾನೆ.
ನಾನು ಮೂಲತಃ ಮಂಗಳೂರಿನವನು. ನನಗೆ ಮೀನೂಟ ಎಂದರೆ ಬಹಳ ಇಷ್ಟ. ಡ್ರಿಂಕ್ಸ್ ನೊಂದಿಗೆ ಸಮುದ್ರಾಹಾರವನ್ನು ನಾನು ಇಷ್ಟಪಡುತ್ತೇನೆ.
ಸೆನಗಲ್ನಲ್ಲಿ ಇದ್ದಾಗಲೂ ಮೀನೂಟ ತಪ್ಪದೇ ಮಾಡುತ್ತಿದ್ದೆ. ಕಳೆದ ಕೆಲ ದಿನಗಳಿಂದ ಆ ಊಟ ಇಲ್ಲದೇ ಇರಲು ಸಾಧ್ಯ ವಾಗುತ್ತಿಲ್ಲ. ಮೀನಿನ ಖಾದ್ಯಗಳಿಂದ ದೂರವಿರುವುದು ನನಗೆ ಅಸಾಧ್ಯ. ದಯವಿಟ್ಟು ಇದೊಂದು ಕೋರಿಕೆ ಈಡೇರಿಸಿ.. ಆಹಾರದ ಜೊತೆ ಮೀನು ಮತ್ತು ಡ್ರಿಂಕ್ಸ್ ಕೊಟ್ಟು ಸಹಕರಿಸಿ. ನಿಮಗೆ ಬೇಕಾದ ಎಲ್ಲಾ ಮಾಹಿತಿ ಒದಗಿಸಲು ಸಿದ್ಧನಿದ್ದೇನೆ ಎಂದು ತನಿಖಾಧಿಕಾರಿ ಎದುರು ರವಿ ಪೂಜಾರಿ ತಪ್ಪೊಪ್ಪಿಕೊಂಡಿದ್ದಾನೆ.
ಅವನಿಗೆ ಕೆಲವು ದಿನ ಮೀನೂಟ ನೀಡಲಾಗುತ್ತಿತ್ತು ಆದರೆ ಅವನು ಅದನ್ನು ಪ್ರತಿದಿನ ಕೇಳಲು ಆರಂಭಿಸಿದ. ಹಾಗಾಗಿ ಅದನ್ನು ನಿಲ್ಲಿಸಲಾಯಿತು ಆದರೆ ಮದ್ಯ ಅವನಿಗೆ ನೀಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗ, ಅವನು ಇಡೀ ರಾತ್ರಿ ನಿದ್ರೆ ಮಾಡದೆ ಕುಳಿತು ಕೊಂಡಿರುತ್ತಾನೆ. ಮಾಂಸಾಹಾರಿ ಆಹಾರ ಮತ್ತು ಮದ್ಯ ಸೇವಿಸಿದರೆ ಮಾತ್ರ ತನಗೆ ಉತ್ತಮ ನಿದ್ರೆ ಬರುತ್ತದೆ ಎಂದು ಹೇಳುವ ಮೂಲಕ ಅವನು ಪೊಲೀಸರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಆತನ ಕಣ್ಣುಗಳು ಸರಿಯಾಗಿ ನಿದ್ದೆ ಮಾಡದೆ ಊದಿಕೊಂಡಿದ್ದವು. ಕೊನೆಗೆ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದ್ದು, ಇದೀಗ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ರವಿ ಪೂಜಾರಿ ನನಗೆ ಕನ್ನಡ ಭಾಷೆ ಅರ್ಥ ಆಗುತ್ತದೆ. ಆದರೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ. ತುಳು ಮತ್ತು ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲೆ ಮತ್ತು ಸ್ವಲ್ಪ ಮಟ್ಟಿಗೆ ಇಂಗ್ಲಿಷ್ ಅನ್ನು ನಿರ್ವಹಿಸಲ್ಲೆ ಎಂದು ಹೇಳಿದ್ದು, ತುಳು ಅಥವಾ ಹಿಂದಿ ಭಾಷೆಯಲ್ಲಿ ಕೇಳಿ, ಎಲ್ಲವನ್ನೂ ಹೇಳುತ್ತೇನೆ ಎಂದು ಕೇಳಿಕೊಂಡಿದ್ದಾನೆ. ಇದರಿಂದ ಅಚ್ಚರಿಗೊಂಡ ತನಿಖಾಧಿಕಾರಿಗಳು, ತುಳು ಮತ್ತು ಹಿಂದಿ ಬರುವ ಅಧಿಕಾರಿಗಳ ಮೂಲಕ ಅವನ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಎಲ್ಲ ವಿಚಾರಗಳನ್ನು ಹೇಳಿಕೊಂಡಿರುವ ರವಿ ಪೂಜಾರಿ, ನಾನು 16ನೇ ವರ್ಷಕ್ಕೆ ಅಪರಾಧ ಜಗತ್ತಿಗೆ ಕಾಲಿಟ್ಟೆ. ಕ್ರಿಕೆಟ್ ಆಡುವಾಗ ಎದುರಾಳಿ ಯುವಕನಿಗೆ ಬ್ಯಾಟ್ ನಲ್ಲಿ ಹೊಡೆದು, ತನಗೆ ತಾನೇ ರಾಜ ಎಂದು ಭಾವಿಸಲು ಪ್ರಾರಂಭಿಸಿದೆ ಮತ್ತು ಹೆಮ್ಮೆಯಿಂದ ಭೂಗತ ಜಗತ್ತಿಗೆ ಪ್ರವೇಶಿಸಿದ್ದಾಗಿ ಹೇಳಿಕೆ ನೀಡಿದ್ದು, ಅದನ್ನು ಚಿತ್ರೀಕರಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ
ರವಿ ಪೂಜಾರಿ ತನ್ನ ವಿಚಾರಣೆಯನ್ನು ಬೆಂಗಳೂರು ಪೊಲೀಸರಿಗೆ ಸೀಮಿತಗೊಳಿಸುವಂತೆ ಕರ್ನಾಟಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಮುಂಬೈ ಪೊಲೀಸರ ವಶಕ್ಕೆ ನನ್ನನ್ನು ಕೊಡಬೇಡಿ. ಈ ಮೊದಲು ನಾನು ಮುಂಬೈ ಭೂಗತ ಜಗತ್ತಿನಲ್ಲಿದ್ದಾಗ, 21 ಜನ ದಾವೂದ್ ಇಬ್ರಾಹಿಂ ಸದಸ್ಯರನ್ನು ಕೊಲೆ ಮಾಡಿದ್ದೇನೆ. ನಾನು ಅಲ್ಲಿಗೆ ಹೋದರೆ, ದಾವೂದ್ ಕಡೆಯವರು ನನ್ನನ್ನು ಎನ್ಕೌಂಟರ್ ಮಾಡುತ್ತಾರೆ. ಹೀಗಾಗಿ ಅಲ್ಲಿಗೆ ಕಳುಹಿಸಬೇಡಿ. ನನ್ನನ್ನು ವಿಚಾರಣೆ ಮಾಡಲು ಮುಂಬೈ ಪೊಲೀಸರು ಇಲ್ಲಿಗೆ ಬಂದರೆ ನಾನು ಅವರಿಗೆ ಉತ್ತರಿಸುತ್ತೇನೆ. ಆದರೆ ದಯವಿಟ್ಟು ನನ್ನನ್ನು ಮಾತ್ರ ಅಲ್ಲಿಗೆ ಕರೆದೊಯ್ಯಬೇಡಿ ಎಂದು ತನಿಖಾ ಅಧಿಕಾರಿಗಳೊಂದಿಗೆ ಮನವಿ ಮಾಡಿರುವುದಾಗಿ ತಿಳಿದು ಬಂದಿದೆ.
ಕರ್ನಾಟಕದಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆ ಪೂರ್ಣಗೊಂಡ ಬಳಿಕ ರವಿ ಪೂಜಾರಿಯನ್ನು ಮುಂಬೈ ಪೊಲೀಸರ ಮನವಿ ಮೇರೆಗೆ ಅವರಿಗೆ ಹಸ್ತಾಂತರಿಸಲು ರಾಜ್ಯ ಪೊಲೀಸರು ನಿರ್ಧರಿಸಿದ್ದರು.