ರೇವಣ್ಣ ಅವರಿಗೆ ನಿಂಬೆಹಣ್ಣು ನೀಡಿ ನೀವು ಮುಖ್ಯಮಂತ್ರಿ ಆಗಿಬಿಟ್ಟಿರಲ್ಲ ಎಂದು ರಮೇಶ್ ಕುಮಾರ್ ಸಿಎಂ ಯಡಿಯೂರಪ್ಪನವರನ್ನು ಟೀಕಿಸಿದರು.
ಮಂಗಳವಾರ ಸದನದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಶಾಸಕ ಜಿ.ಟಿ.ದೇವೇಗೌಡ ಅವರು ಭ್ರಷ್ಟಾಚಾರ, ಜಾತಿ ವ್ಯವಸ್ಥೆಯ ಬಗ್ಗೆ ಉಲ್ಲೇಖಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಟೀ ಮಾರಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಾಲ್ಯದಲ್ಲಿ ನಿಂಬೆಹಣ್ಣು ಮಾರಿ, ಮಾಜಿ ಸಿಎಂ ಸಿದ್ದರಾಮಯ್ಯನವರು ಎಮ್ಮೆ ಮೇಯಿಸಿ, ಜೆಡಿಎಸ್ ವರಿಷ್ಠ ದೇವೇಗೌಡ ರೈತ ಕುಟುಂಬದಿಂದ ಬಂದು ಉನ್ನತ ಸ್ಥಾನ ಪಡೆದಿದ್ದಾರೆ. ಆದರೆ ಭ್ರಷ್ಟಾಚಾರ, ಜಾತಿ ವ್ಯವಸ್ಥೆ ಹಾಗೆಯೇ ಇದೆ. ಯಾವುದೇ ಬದಲಾವಣೆ ಆಗಿಲ್ಲ ಎಂದರು.
ಆ ಸಮಯದಲ್ಲಿ ಎದ್ದು ನಿಂತ ಮಾಜಿ ಸ್ವೀಕರ್ ರಮೇಶ್ ಕುಮಾರ್ ಬಹುಶಃ ಅದೇ ನಿಂಬೆಹಣ್ಣನ್ನು ಸಿಎಂ ಯಡಿಯೂರಪ್ಪ ಅವರು ಮಾಜಿ ಸಚಿವ ರೇವಣ್ಣ ಅವರಿಗೆ ಕೊಟ್ಟಿರಬಹುದಾ. ಈ ಕುರಿತಾಗಿ ಅವರು ಸ್ಪಷ್ಟನೆ ನೀಡಲಿ ಎಂದು ತಮಾಷೆ ಮಾಡಿದರು.
ರಮೇಶ್ ಕುಮಾರ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ರೇವಣ್ಣ ಈಗ ಸದನದಲ್ಲಿಲ್ಲ. ಅವರು ಬಂದ ಬಳಿಕ ಹೇಳಿ’ ಎಂದು ಸೂಚನೆ ನೀಡಿದರು.
ಅದಕ್ಕೆ ರಮೇಶ್ ಕುಮಾರ್, ರೇವಣ್ಣ ಅವರಿಗೆ ನಿಂಬೆಹಣ್ಣು ನೀಡಿ ನೀವು ಮುಖ್ಯಮಂತ್ರಿ ಆಗಿಬಿಟ್ಟಿರಲ್ಲ ಎಂದು ಸಿಎಂ ಯಡಿಯೂರಪ್ಪನವರಿಗೆ ಹಾಸ್ಯ ಮಾಡಿದರು. ಆದರೆ ಸಿ ಎಂ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು.








