ಬೆಂಗಳೂರು: ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯಾದ ಜನ ಗಣ ಮನಕ್ಕೆ ಸರಿಸಮಾನವಾದ ಸ್ಥಾನಮಾನ ನೀಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮವು ರಾಷ್ಟ್ರಗೀತೆಯ ಘನತೆ ಹಾಗೂ ಸಂವಿಧಾನಾತ್ಮಕ ಸ್ಥಾನಮಾನವನ್ನೇ ಕುಗ್ಗಿಸುವ ಅಪಾಯಕಾರಿ ಪ್ರಯತ್ನವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದೀರ್ಘ ಹೇಳಿಕೆ ನೀಡಿರುವ ಅವರು, ರಾಷ್ಟ್ರಗೀತೆಯ ಬಗ್ಗೆ ಆರೆಸ್ಸೆಸ್ ಮತ್ತು ಸಂಘ ಪರಿವಾರ ಹೊಂದಿರುವ ಐತಿಹಾಸಿಕ ಅಸಮ್ಮತಿಯನ್ನು ಕೇಂದ್ರ ಸರ್ಕಾರ ಈಗ ಅಧಿಕೃತ ಆದೇಶಗಳ ಮೂಲಕ ಜಾರಿಗೆ ತರಲು ಪ್ರಯತ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂಘ ಪರಿವಾರದ ಗುಪ್ತ ಅಜೆಂಡಾ ಜಾರಿ
ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನ ಕುರಿತು ಆರೆಸ್ಸೆಸ್ ಆರಂಭದಿಂದಲೂ ತಕರಾರು ಹೊಂದಿಕೊಂಡೇ ಬಂದಿದೆ. ಸಂಘ ಪರಿವಾರದ ಎರಡನೇ ಸರಸಂಘ ಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು 1966ರಲ್ಲಿ ಪ್ರಕಟಿಸಿದ ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ ಈ ಭಿನ್ನಮತವನ್ನು ಸ್ಪಷ್ಟವಾಗಿ ದಾಖಲಿಸಿದ್ದರು. ಆರು ದಶಕಗಳ ಹಿಂದೆ ವ್ಯಕ್ತವಾಗಿದ್ದ ವಂದೇ ಮಾತರಂಗೆ ಆದ್ಯತೆ ನೀಡುವ ಆ ಮನೋಭಾವನೆಯನ್ನು, ಈಗ ಕೇಂದ್ರ ಸರಕಾರ ಅಧಿಕೃತ ಮಾರ್ಗಸೂಚಿಗಳ ಮೂಲಕ ಜಾರಿಗೊಳಿಸಲು ಮುಂದಾಗಿರುವುದು ದೇಶದ ಜಾತ್ಯತೀತ ಮೌಲ್ಯಗಳಿಗೆ ಮತ್ತು ಒಕ್ಕೂಟ ವ್ಯವಸ್ಥೆಗೆ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ.
ಶಿಷ್ಟಾಚಾರ ಮತ್ತು ಸಂವಿಧಾನದ ಉಲ್ಲಂಘನೆ
ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳಲ್ಲಿನ ಅಂಶಗಳು ರಾಷ್ಟ್ರಗೀತೆಗೆ ಸಂವಿಧಾನಾತ್ಮಕವಾಗಿ ಒದಗಿಸಿರುವ ಸ್ಥಾನಮಾನವನ್ನು ಪರೋಕ್ಷವಾಗಿ ಕುಂದಿಸುವಂತಿವೆ. ಸಂವಿಧಾನ ಸಭೆಯು ಮಾನ್ಯತೆ ನೀಡಿದಂತೆ ವಂದೇ ಮಾತರಂನ ಎರಡು ಅಂತಸ್ತುಗಳ ಬದಲಾಗಿ, ಪೂರ್ಣ ಆರು ಅಂತಸ್ತುಗಳನ್ನು ಹಾಡಬೇಕೆಂದು ಸೂಚಿಸಿರುವುದು ಮತ್ತು ರಾಷ್ಟ್ರಗೀತೆ ಹಾಡುವ ಮೊದಲು ವಂದೇ ಮಾತರಂ ಹಾಡಬೇಕೆಂಬ ನಿಯಮ ರೂಪಿಸಿರುವುದು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ರಾಷ್ಟ್ರಧ್ವಜಾರೋಹಣ ಮತ್ತು ರಾಷ್ಟ್ರಪತಿಗಳ ಆಗಮನದ ವೇಳೆ ರಾಷ್ಟ್ರಗೀತೆಗಿರುವ ಆದ್ಯತೆಯನ್ನು ಇದು ಕಸಿದುಕೊಳ್ಳುತ್ತದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಇತಿಹಾಸ ಮತ್ತು ಪರಂಪರೆಗೆ ಅವಮಾನ
ವಂದೇ ಮಾತರಂ ಗೀತೆಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವ ಹರಿಪ್ರಸಾದ್, 1875ರಲ್ಲಿ ಬಂಕಿಂಚಂದ್ರ ಚಟ್ಟೋಪಾಧ್ಯಾಯರು ರಚಿಸಿದ ಮೂಲ ಗೀತೆಯಲ್ಲಿ ಕೇವಲ ಎರಡು ಅಂತಸ್ತುಗಳಿದ್ದವು. ನಂತರ ಆನಂದ ಮಠ ಕಾದಂಬರಿಗಾಗಿ ನಾಲ್ಕು ಅಂತಸ್ತುಗಳನ್ನು ಸೇರಿಸಲಾಗಿತ್ತು. ಆದರೆ, 1896ರ ಎಐಸಿಸಿ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದಾಗಿನಿಂದ ಹಿಡಿದು, ಸ್ವಾತಂತ್ರ್ಯ ಹೋರಾಟದಿಯುದ್ದಕ್ಕೂ ಕೇವಲ ಎರಡು ಅಂತಸ್ತುಗಳನ್ನೇ ಬಳಸಿಕೊಂಡು ಬರಲಾಗಿದೆ. 1937ರ ಅಧಿವೇಶನದಲ್ಲಿಯೂ ಇದೇ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಹೀಗಿರುವಾಗ, ಬಂಗಾಳಿ ಭಾಷೆಯ ಇಬ್ಬರು ಶ್ರೇಷ್ಠ ಕವಿಗಳ ಸೃಷ್ಟಿಗಳನ್ನು ಪರಸ್ಪರ ಎತ್ತಿಕಟ್ಟಿ ಅನಗತ್ಯ ವಿವಾದ ಸೃಷ್ಟಿಸುವುದು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಗೆ ಮಾಡುತ್ತಿರುವ ಅವಮಾನ ಎಂದು ಅವರು ಪ್ರತಿಪಾದಿಸಿದ್ದಾರೆ.
ಚುನಾವಣಾ ತಂತ್ರದ ಅನುಮಾನ
ರವೀಂದ್ರನಾಥ ಟಾಗೋರ್ ರಚಿಸಿದ ಜನ ಗಣ ಮನ ಕೇವಲ ಒಂದು ಗೀತೆ ಅಲ್ಲ, ಅದು ಭಾರತದ ಭೌಗೋಳಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ಏಕತೆಯನ್ನು ಸಾರುವ ರಾಷ್ಟ್ರಚೇತನೆಯ ಘೋಷಣೆ. ಇದನ್ನು ದುರ್ಬಲಗೊಳಿಸುವುದು ದೇಶದ ಏಕತೆಗೆ ಧಕ್ಕೆ ತರಲಿದೆ. ಪ್ರಸ್ತುತ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾವನಾತ್ಮಕ ವಿಷಯವನ್ನು ಕೆಣಕಿ ರಾಜಕೀಯ ಲಾಭ ಪಡೆಯಲು ಈ ವಿವಾದವನ್ನು ಉದ್ದೇಶಪೂರ್ವಕವಾಗಿ ಮುನ್ನಲೆಗೆ ತರಲಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಹರಿಪ್ರಸಾದ್ ಶಂಕೆ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ಆಶಯಕ್ಕೆ ಧಕ್ಕೆ
1950ರ ಜನವರಿ 24ರಂದು ಸಂವಿಧಾನ ಸಭೆಯು ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಏಕಮತದಿಂದ ಒಪ್ಪಿಕೊಂಡಿತ್ತು. ಸಂವಿಧಾನದ 51-ಎ ವಿಧಿಯ ಪ್ರಕಾರ ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ. ಆದರೆ ಈಗ ನಡೆಯುತ್ತಿರುವ ಬದಲಾವಣೆಗಳು ಕೇವಲ ನಿಯಮಗಳ ಬದಲಾವಣೆಯಲ್ಲ, ಇದು ಭಾರತೀಯ ಗಣರಾಜ್ಯದ ಆತ್ಮ ಮತ್ತು ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.








