ಐಪಿಎಲ್ ನಲ್ಲಿ ನೀರಸ ಪ್ರದರ್ಶನ ನೀಡಿದ್ರೂ ಗ್ಲೇನ್ ಮ್ಯಾಕ್ಸ್ ವೆಲ್ ಗೆ ಯಾಕಿಷ್ಟು ಡಿಮ್ಯಾಂಡ್…?
ಗ್ಲೇನ್ ಮ್ಯಾಕ್ಸ್ ವೆಲ್.. ಆಸ್ಟ್ರೇಲಿಯಾದ ಆಲ್ ರೌಂಡರ್. ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುವ ಗ್ಲೇನ್ ಮ್ಯಾಕ್ಸ್ ವೆಲ್ ಅಪಾಯಕಾರಿ ಬ್ಯಾಟ್ಸ್ ಮೆನ್ ಎಂಬುದರಲ್ಲಿ ಎರಡು ಮಾತಿಲ್ಲ. ಏಕಾಂಗಿಯಾಗಿ ತಂಡದ ಗತಿಯನ್ನೇ ಬದಲಾಯಿಸುವಂತತಹ ಸಾಮಥ್ರ್ಯ ಗ್ಲೇನ್ ಮ್ಯಾಕ್ಸ್ ವೆಲ್ ಗಿದೆ.
ಹಾಗಾಗಿಯೇ ಆಧುನಿಕ ಕ್ರಿಕೆಟ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಎದುರಾಳಿ ಬೌಲರ್ ಗಳಿಗೆ ದುಃಸ್ವಪ್ನವಾಗಿ ಕಾಡುತ್ತಿರುತ್ತಾರೆ. ಅದರಲ್ಲೂ ಚುಟುಕು ಕ್ರಿಕೆಟ್ ನಲ್ಲಿ ಮ್ಯಾಕ್ಸ್ ವೆಲ್ ಅಬ್ಬರ ಜೋರಾಗಿಯೇ ಇರುತ್ತೆ. ಹೀಗಾಗಿಯೇ ಐಪಿಎಲ್ ನಲ್ಲಿ ಮ್ಯಾಕ್ಸ್ ವೆಲ್ ಗೆ ಭಾರೀ ಡಿಮ್ಯಾಂಡ್.
ಹೌದು, 2021ರ ಐಪಿಎಲ್ ಮಿನಿ ಬಿಡ್ಡಿಂಗ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಅವರು, 14.25 ಕೋಟಿ ರೂಪಾಯಿಗೆ ಆರ್ ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಆದ್ರೆ 2020ರ ಐಪಿಎಲ್ ನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ತೀರಾ ಕಳಪೆ ಪ್ರದರ್ಶನ ನೀಡಿದ್ದರು. ಸಾಲು ಸಾಲು ಅವಕಾಶ ನೀಡಿದ್ರೂ ಮ್ಯಾಕ್ಸ್ ವೆಲ್ ಬ್ಯಾಟ್ ನಿಂದ ರನ್ ಗಳು ಹರಿದು ಬಂದಿರಲಿಲ್ಲ. ಹೀಗಾಗಿ ಸಾಕಷ್ಟು ಟೀಕೆಗಳನ್ನು ಕೇಳಬೇಕಾಯ್ತು. ಆದ್ರೂ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ಈ ಬಾರಿಯೂ ಬಿಡ್ಡಿಂಗ್ ನಲ್ಲಿ ಖರೀದಿ ಮಾಡಲು ಫ್ರಾಂಚೈಸಿಗಳು ಮುಗಿಬಿದ್ದಿದ್ದವು.
ಅಂದ ಹಾಗೇ ಗ್ಲೇನ್ ಮ್ಯಾಕ್ಸ್ ವೆಲ್ 2012ರಿಂದ ಐಪಿಎಲ್ ನಲ್ಲಿ ಆಡಲು ಶುರು ಮಾಡಿದ್ದರು. ಬೇಡಿಕೆಯ ಆಟಗಾರನಾಗಿರುವ ಗ್ಲೇನ್ ಮ್ಯಾಕ್ಸ್ ವೆಲ್ ಕೋಟಿಯ ಲೆಕ್ಕಚಾರದಲ್ಲೇ ದುಡ್ಡು ಪಡೆದುಕೊಂಡಿದ್ದಾರೆ. ಕಳೆದ ಬಾರಿಯಂತೂ 10.75 ಕೋಟಿಗೆ ಹರಾಜಾಗಿದ್ದರು. ಆದ್ರೆ ದುಡ್ಡಿಗೆ ತಕ್ಕಂತೆ ಗ್ಲೇನ್ ಮ್ಯಾಕ್ಸ್ ವೆಲ್ ಆಡುತ್ತಿಲ್ಲ ಅನ್ನೋ ಆರೋಪವೂ ಅವರ ಮೇಲಿದೆ.
ಇನ್ನು 2012ರಲ್ಲಿ ಮ್ಯಾಕ್ಸ್ ವೆಲ್ ಡೆಲ್ಲಿ ತಂಡದ ಪರ ಆಡಿದ್ದರು. ಆಡಿರುವ ಎರಡು ಪಂದ್ಯಗಳಲ್ಲಿ ಗಳಿಸಿದ್ದು ಆರು ರನ್ ಹಾಗೂ ಒಂದು ವಿಕೆಟ್
2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಗ್ಲೇನ್, ಆಡಿರುವ ಮೂರು ಪಂದ್ಯಗಳಲ್ಲಿ 36 ರನ್ ಗಳಿಸಿದ್ದರು. ಯಾವುದೇ ವಿಕೆಟ್ ಪಡೆದಿರಲಿಲ್ಲ.
2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಕಣಕ್ಕಿಳಿದಿದ್ದ ಗ್ಲೇನ್ ಮ್ಯಾಕ್ಸ್ ವೆಲ್, ಆಡಿರುವ 16 ಪಂದ್ಯಗಳಲ್ಲಿ 552 ರನ್ ಹಾಗೂ ಒಂದು ವಿಕೆಟ್ ಪಡೆದುಕೊಂಡಿದ್ದರು. ಇದು ಗ್ಲೇನ್ ಮ್ಯಾಕ್ಸ್ ವೆಲ್ ಅವರ ಐಪಿಎಲ್ ನ ಶ್ರೇಷ್ಠ ಸಾಧನೆಯಾಗಿದೆ.
ಇನ್ನು 2015ರಲ್ಲೂ ಕಿಂಗ್ಸ್ ಇಲೆವೆನ್ ತಂಡದ ಪರ ಆಡಿದ್ದ ಗ್ಲೇನ್, 11 ಪಂದ್ಯಗಳಲ್ಲಿ 145 ರನ್ ಹಾಗೂ ಎರಡು ವಿಕೆಟ್ ಪಡೆದಿದ್ದರು.
2016ರಲ್ಲಿ 11 ಪಂದ್ಯಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿ 179 ರನ್ ಗಳಿಸಿದ್ದರು. ಯಾವುದೇ ವಿಕೆಟ್ ಪಡೆದಿಲ್ಲ.
2017ರಲ್ಲೂ ಕಿಂಗ್ಸ್ ಇಲೆವೆನ್ ತಂಡದ ಪರ 14 ಪಂದ್ಯಗಳಲ್ಲಿ ಆಡಿ 310 ರನ್ ಗಳಿಸಿದ್ದರು. ಏಳು ವಿಕೆಟ್ ಉರುಳಿಸಿದ್ದರು.
2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ 12 ಪಂದ್ಯಗಳನ್ನು ಆಡಿ 169 ರನ್ ಹಾಗೂ ಐದು ವಿಕೆಟ್ ಉರುಳಿಸಿದ್ದರು. ಆದ್ರೆ 2019ರ ಐಪಿಎಲ್ ನಲ್ಲಿ ಆಡಿಲ್ಲ.
ಇನ್ನು 2020ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಪರ 13 ಪಂದ್ಯಗಳನ್ನು ಆಡಿ ಗಳಿಸಿದ್ದು ಬರೀ 108 ರನ್. ಪಡೆದಿರುವ ವಿಕೆಟ್ ಗಳು ಮೂರು.
ಇದು ಮ್ಯಾಕ್ಸ್ ವೆಲ್ ಅವರ ಐಪಿಎಲ್ ಸಾಧನೆ. ಕೋಟಿ ಕೋಟಿ ದುಡ್ಡು ಪಡೆದುಕೊಂಡ್ರೂ ಐಪಿಎಲ್ ನಲ್ಲಿ ಫ್ರಾಂಚೈಸಿಗಳ ನಂಬಿಕೆಗೆ ತಕ್ಕಂತೆ ಆಡಲು ಗ್ಲೇನ್ ಮ್ಯಾಕ್ಸ್ ವೆಲ್ ವಿಫಲರಾಗಿದ್ದಾರೆ. ಆದ್ರೂ ಮ್ಯಾಕ್ಸ್ ವೆಲ್ ಅವರನ್ನು ಖರೀದಿ ಮಾಡಲು ಫ್ರಾಂಚೈಸಿಗಳು ಮುಗಿಬೀಳುತ್ತಿರುವುದು ಅಚ್ಚರಿಯಾಗುತ್ತದೆ.
ಈ ಹಿಂದೆ ವೀರೇಂದ್ರ ಸೆಹ್ವಾಗ್ ಗ್ಲೇನ್ ಮ್ಯಾಕ್ಸ್ ವೆಲ್ ವಿರುದ್ಧ ಕಿಡಿ ಕಾರಿದ್ದರು. ಗ್ಲೇನ್ ಎಂಜಾಯ್ ಮಾಡಲು ಐಪಿಎಲ್ ನಲ್ಲಿ ಆಡುತ್ತಾನೆ ಎಂದೇ ನೇರವಾಗಿ ಟೀಕೆ ಮಾಡಿದ್ದರು.
ಒಟ್ಟಿನಲ್ಲಿ ಇದೀಗ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಪಾಲಾಗಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಾದ್ರೂ ಗ್ಲೇನ್ ಮ್ಯಾಕ್ಸ್ ವೆಲ್ ಬ್ಯಾಟ್ ನಿಂದ ರನ್ ಹರಿದು ಬರೊತ್ತೋ ಅನ್ನೋದನ್ನು ಕಾದು ನೋಡಬೇಕು.