ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ – ಅಗ್ರ 50 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ ಭಾರತ
ಹೊಸದಿಲ್ಲಿ, ಸೆಪ್ಟೆಂಬರ್03: ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ ಮೊದಲ ಬಾರಿಗೆ ಅಗ್ರ 50 ದೇಶಗಳ ಗುಂಪನ್ನು ಸೇರಿಕೊಂಡಿದ್ದು, ನಾಲ್ಕು ಸ್ಥಾನಗಳ ಜಿಗಿತ ಕಂಡಿದ್ದು 48 ನೇ ಸ್ಥಾನಕ್ಕೆ ಏರಿದೆ. ಮಧ್ಯ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳು ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಜಾಗತಿಕ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯುಐಪಿಒ), ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ಐಎನ್‌ಎಸ್‌ಎಡಿ ಬ್ಯುಸಿನೆಸ್ ಸ್ಕೂಲ್ ಜಂಟಿಯಾಗಿ ಬಿಡುಗಡೆ ಮಾಡಿದ 2020 ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿಐಐ) ಪಟ್ಟಿಯ ಪ್ರಕಾರ, ಶ್ರೇಯಾಂಕಗಳು ಮೇಲ್ಭಾಗದಲ್ಲಿ ಸ್ಥಿರತೆಯನ್ನು ತೋರಿಸುತ್ತವೆ. ಚೀನಾ, ಭಾರತ, ಫಿಲಿಪೈನ್ಸ್ ಮತ್ತು ವಿಯೆಟ್ನಾಂ ನಾವೀನ್ಯತೆ ಶ್ರೇಯಾಂಕದಲ್ಲಿ ಗಣನೀಯವಾಗಿ ಮುಂದುವರೆದಿದೆ.
ನಾವೀನ್ಯತೆ ಶ್ರೇಯಾಂಕದಲ್ಲಿ ಸ್ವಿಟ್ಜರ್ಲೆಂಡ್, ಸ್ವೀಡನ್, ಯುಎಸ್, ಯುಕೆ ಮತ್ತು ನೆದರ್ಲ್ಯಾಂಡ್ಸ್ ಮುಂಚೂಣಿಯಲ್ಲಿವೆ ಮತ್ತು ಅಗ್ರ 10 ಸ್ಥಾನಗಳಲ್ಲಿ ಹೆಚ್ಚಿನ ಆದಾಯದ ದೇಶಗಳು ಪ್ರಾಬಲ್ಯ ಹೊಂದಿವೆ ಎಂದು ಡಬ್ಲ್ಯುಐಪಿಒ ಪ್ರಕಟಣೆಯಲ್ಲಿ ತಿಳಿಸಿದೆ.
ಜಗತ್ತಿನ ಕೆಳ ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಭಾರತ ವಿಶ್ವದ ಮೂರನೇ ದೇಶವಾಗಿ ಹೊರಹೊಮ್ಮಿದೆ.
ಐಸಿಟಿ (ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ) ಸೇವೆಗಳ ರಫ್ತು, ಸರ್ಕಾರಿ ಆನ್‌ಲೈನ್ ಸೇವೆಗಳು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪದವೀಧರರು ಮತ್ತು ಆರ್ & ಡಿ-ತೀವ್ರ ಜಾಗತಿಕ ಕಂಪನಿಗಳಂತಹ ಸೂಚಕಗಳಲ್ಲಿ ಭಾರತವು ಅಗ್ರ 15 ಸ್ಥಾನದಲ್ಲಿದೆ.








