ರಾಯಚೂರು : ಜಿಲ್ಲೆಯ ಗುಂಡಲಬಂಡಾ ಜಲಪಾತ ನೋಡಲು ಹೋಗಿ ನಾಪತ್ತೆಯಾಗಿದ್ದ ತಂದೆ ಮಗ ಇಂದು ಶವವಾಗಿ ಪತ್ತೆಯಾಗಿದ್ದಾರೆ. 35 ವರ್ಷದ ಕೃಷ್ಣಪ್ಪ ಹಾಗೂ ಆತನ ಮಗ 5 ವರ್ಷದ ಧನುಷ್ ಮೃತರು.
ದೇವದುರ್ಗದ ಮೂಡಲಗುಂಡ ಗ್ರಾಮದ ನಾಲ್ವರು ನಿನ್ನೆ ಗುಂಡಲಬಂಡಾ ಜಲಪಾತ ನೋಡಲು ಹೋಗಿದ್ದರು. ಈ ವೇಳೆ ನೀರಿನ ಪ್ರಮಾಣ ಹಾಗೂ ಸೆಳೆತ ಹೆಚ್ಚಾಗಿ ಈ ನಾಲ್ವರು ಅಪಾಯಕ್ಕೆ ಸಿಲುಕಿದ್ದರು. ಇವರಲ್ಲಿ ಮಾಹಾಂತೇಶ್ ಹಾಗೂ ಸಿದ್ದಣ್ಣ ಎಂಬುವವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು. ಆದ್ರೆ ಕೃಷ್ಣಪ್ಪ ಹಾಗೂ ಧನುಶ್ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ನಿನ್ನೆ ಸಂಜೆವರೆಗೂ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಇಬ್ಬರು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆಯಿಂದ ಹಟ್ಟಿ ಠಾಣೆ ಪೊಲೀಸ್, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಾಚರಣೆ ನಡೆಸಿ ಇಬ್ಬರ ಶವವನ್ನು ಹೊರತಂದಿದ್ದಾರೆ.








