ವಿಚ್ಛೇದನ ತಡೆಗಟ್ಟಲು ಹೊಸ ಕಾನೂನು – ಗೋವಾ ಸರ್ಕಾರ
ಗೋವಾ : ಇತ್ತೀಚಿನ ಕಾಲಮಾನದಲ್ಲಿ ಮದುವೆ ಆಗಿ 2-3 ವರ್ಷಗಳಿಗೆಲ್ಲಾ ದಂಪತಿಗಳು ಡೈವೋರ್ಸ್ ಪಡೆಯುತ್ತಿರುವುದು ಹೆಚ್ಚಾಗಿಬಿಟ್ಟಿದೆ.. ಒಂದು ರೀತಿ ಕಾಮನ್ ಎಂಬಂತೆಯೂ ಆಗಿಬಿಟ್ಟಿದೆ.. ಆದ್ರೆ ಈ ರೀತಿ ಡಿವೋರ್ಸ್ ಪಡೆಯೋದ್ರಿಂದ ಮಕ್ಕಳ ಜೀವನದ ಮೇಲೆ ಬಲವಾದ ಹಾಗೂದುಷ್ಪರಿಣಾಮ ಬೀರುತ್ತೆ..
ಇದೀಗ ವಿಚ್ಛೇದನ ಪ್ರಕರಣಗಳಿಗೆ ಕಡಿವಾಣ ಹಾಕಲು ಗೋವಾ ಸರ್ಕಾರ ಸಜ್ಜಾಗಿದೆ.. ಹೌದು ಗೋವಾ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ವಿವಾಹಕ್ಕೂ ಮುನ್ನ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.
ಈ ಕುರಿತು ಗೋವಾ ಕಾನೂನು ಸಚಿವ ನಿಲೇಶ್ ಕ್ಯಾಬ್ರಾಲ್ ಸೋಮವಾರ ಮಾಹಿತಿ ನೀಡಿದ್ದು, ಗೋವಾ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಆ್ಯಂಡ್ ರೂರಲ್ ಡೆವಲಪ್‍ಮೆಂಟ್(ಜಿಐಪಿಎಆರ್ ಡಿ) ಕೌನ್ಸಲಿಂಗ್ ಕೋರ್ಸ್ ಹಾಗೂ ಇದರ ಸ್ವರೂಪವನ್ನು ಅಂತಿಮಗೊಳಿಸಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ವಿವಾಹಪೂರ್ವ ಕೌನ್ಸಲಿಂಗ್ ಕಡ್ಡಾಯಗೊಳಿಸಲು ಹೊಸ ನೀತಿಯನ್ನು ತರುತ್ತಿದ್ದು, ಧಾರ್ಮಿಕ ಸಂಸ್ಥೆಗಳೂ ಸಹ ಇದರಲ್ಲಿ ಭಾಗವಹಿಸಲಿವೆ. ಗೋವಾದಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಪ್ರಕರಣಗಳನ್ನು ತಡೆಯಲು ಈ ಕಾನೂನು ತರಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿವಾಹವಾಗಿ 6 ತಿಂಗಳಿಂದ 1 ವರ್ಷದ ಅವಧಿಯಲ್ಲಿ ಹೆಚ್ಚು ಜನ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ವಿವಾಹಕ್ಕೂ ಮೊದಲು ಕೌನ್ಸಲಿಂಗ್ ನಡೆಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಈ ಮೂಲಕ ದಾಂಪತ್ಯದ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ತಿಂಗಳು ಎಷ್ಟು ವಿಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ ಎಂಬ ನಿರ್ದಿಷ್ಟ ಅಂಕಿ ಅಂಶಗಳು ಸದ್ಯ ನಮ್ಮ ಬಳಿ ಇಲ್ಲ. ಆದರೆ ಇತ್ತೀಚೆಗೆ ಈ ಸಂಖ್ಯೆಗಳಲ್ಲಿ ಏರಿಕೆಯಾಗಿದೆ. ಹೀಗಾಗಿ ಕೌನ್ಸಲಿಂಗ್ ಅಗತ್ಯವಿದೆ ಎಂದು ತಿಳಿಸಿದ್ದಾರೆ.