ಮೈಸೂರು : ಕೊರೊನಾ ಭೀತಿ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದ್ರೆ
ಇಂದು ಆಷಾಢ ಮಾಸದ ಮೂರನೇ ಶುಕ್ರವಾರವಾಗಿರುವುದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ.
ಆಷಾಢ ಮಾಸದ ಮೂರನೇ ಶುಕ್ರವಾರವಾಗಿದ್ದರಿಂದ ಚಾಮುಂಡಿ ಬೆಟ್ಟದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ಪೂಜೆಯನ್ನು ಮಾತ್ರ ಮಾಡಲಾಗಿದೆ. ಹೀಗಾಗಿ ನಟ ದರ್ಶನ್ ಹಾಗೂ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ದೇವಸ್ಥಾನದ ಆವರಣದಲ್ಲೇ ಚಾಮುಂಡಿ ತಾಯಿ ಉತ್ಸವ ನಡೆದಿದ್ದು, ಈಗಾಗಲೇ ಪೂಜಾ ಕೈಂಕರ್ಯಗಳು ಮುಕ್ತಾಯವಾಗಿದೆ. ನಟ ದರ್ಶನ್ ತಾಯಿ ಚಾಮುಂಡಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡಿದ್ದಾರೆ.
ಮೂರನೇ ಆಷಾಢ ಶುಕ್ರವಾರ ಹಾಗೂ ವಾರಾಂತ್ಯ ಶನಿವಾರ, ಭಾನುವಾರದಂದು ಚಾಮುಂಡಿ ಬೆಟ್ಟಕ್ಕೆ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧವಿದೆ. ಇದರ ಜೊತೆಗೆ ಸೋಮವಾರ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವವಿರುವ ಕಾರಣ ಹಾಗೂ ಆಷಾಢ ಮಾಸದ ಕಡೆಯ ಮಂಗಳವಾರ ಸೇರಿ ಸತತ ಐದು ದಿನಗಳ ಕಾಲ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಮಾಡಲಾಗಿದೆ. ಜುಲೈ 17ರಂದು ಕಡೆಯ ಆಷಾಢ ಶುಕ್ರವಾರ ಇರುವ ಕಾರಣ ಅಂದು ಕೂಡ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.