ಉಡುಪಿ: ದೇವರ ಕಾರಣಿಕದಿಂದಾಗಿ ಮನೆ ಬಿಟ್ಟು ಹೋಗಿದ್ದ ಮಗ ಬರೋಬ್ಬರಿ 28 ವರ್ಷಗಳ ನಂತರ ಮನೆಗೆ ಬಂದಿರುವ ಘಟನೆ ನಡೆದಿದೆ.
ಗುರುತೇ ಸಿಗದ ಮಗನನ್ನು ಅಪ್ಪ ಕಂಡು ಹಿಡಿದಿದ್ದಾರೆ. ಉಡುಪಿ (Udupi) ಜಿಲ್ಲೆಯ ಪಡುಕುಡೂರು ಎಂಬಲ್ಲಿ ಈ ಘಟನೆ ನಡೆದಿದೆ. ಕರಾವಳಿಯ ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ ಜಿಲ್ಲೆಯಲ್ಲಿನ ದೇವರ ಕಾರಣಿಕದಿಂದ ಈ ಪವಾಡ ನಡೆದಿದೆ ಎನ್ನಲಾಗಿದೆ.
ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಪಡುಕುಡೂರು ಎಂಬ ಗ್ರಾಮದಲ್ಲಿನ ಸುಂದರ ಪೂಜಾರಿ ಎಂಬುವವರಿಗೆ ಮೂವರು ಮಕ್ಕಳಿದ್ದರು. ಬೋಜ ಪೂಜಾರಿ ಮನೆ ಬಿಟ್ಟು ಹೋಗಿದ್ದ. ಆತ ಹೋಗಿ ಬರೋಬ್ಬರಿ 28 ವರ್ಷಗಳೇ ಕಳೆದಿದ್ದವು. ಆತನ ಸಂಪರ್ಕವೂ ಇರಲಿಲ್ಲ. ತಂದೆ-ತಾಯಿ, ಸೋದರಿಯರು ದೈವ ದೇವರ ಮುಂದೆ ಮಾಡಿದ ಪ್ರಾರ್ಥನೆ, ಹೊತ್ತ ಹರಕೆ ಈಗ ಫಲಕೊಟ್ಟಿದೆ. ಮನೆ ಮಗ ಬೋಜ ಪೂಜಾರಿ ಮರಳಿ ಮನೆಗೆ ಬಂದಿದ್ದಾನೆ. ಈಗ ಕುಟುಂಬಸ್ಥರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
80ರ ತಂದೆ ಸಂತಸ ಪಡುತ್ತಿದ್ದಾರೆ. ಮಾತು ಮತ್ತು ದೈಹಿಕವಾಗಿ ಸಂಪೂರ್ಣ ಬದಲಾಗಿದ್ದ ಬೋಜ ಪೂಜಾರಿಯನ್ನು ತಂದೆ ಪತ್ತೆ ಮಾಡಿದ್ದಾರೆ. ಕೈಯಲ್ಲಿರುವ ಒಂದು ಗುಳ್ಳೆಯಿಂದ ತಂದೆ ಮಗನನ್ನು ಗುರುತು ಪತ್ತೆ ಮಾಡಿದ್ದಾರೆ. ಈಗ ಬೋಜ ಪೂಜಾರಿ ಮದುವೆಯಾಗಿ ಪತ್ನಿ, ಮಗಳ ಜೊತೆ ಹುಬ್ಬಳ್ಳಿಯಲ್ಲಿದ್ದಾರೆ. ಈಗ ತಂದೆ-ತಾಯಿ ಸೇವೆ ಮಾಡಲು ಬೋಜ ನಿರ್ಧರಿಸಿದ್ದಾರೆ.