ದೇಶಭಕ್ತಿಯ ಜಪ ಮಾಡುವ ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಗಳಿಗೆ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಈಗ ಸವಾಲೊಂದನ್ನು ಎಸೆದಿದ್ದಾರೆ. ಬಿಜೆಪಿಯವರಿಗೆ ನಿಜವಾಗಿಯೂ ತ್ರಿವರ್ಣ ಧ್ವಜ ಮತ್ತು ಭಾರತದ ಸಂವಿಧಾನದ ಮೇಲೆ ನಂಬಿಕೆ ಇದ್ದರೆ, ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಸ್ವಾತಂತ್ರ್ಯ ಭಾರತದ ಮೊಟ್ಟಮೊದಲ ಭಯೋತ್ಪಾದಕ ಎಂದು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಗುಡುಗಿದ್ದಾರೆ. ಸಿದ್ಧಾಂತಗಳ ಸಂಘರ್ಷದಲ್ಲಿ ಬಿಜೆಪಿಯ ಮುಖವಾಡವನ್ನು ಕಳಚಲು ಹರಿಪ್ರಸಾದ್ ಅವರು ಈ ಮೂಲಕ ನೇರ ಸಮರ ಸಾರಿದ್ದಾರೆ.
ರಾಜ್ಯ ರಾಜಕಾರಣವನ್ನು ನಡುಗಿಸುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಈ ಕೆಟ್ಟ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದೇ ಸಂಘ ಪರಿವಾರ ಮತ್ತು ಬಿಜೆಪಿಯ ಗುಜರಾತ್ ನಾಯಕರು ಎಂದು ಬಾಂಬ್ ಸಿಡಿಸಿದ್ದಾರೆ. ಆಧುನಿಕ ಭಾರತದಲ್ಲಿ ಸ್ಟಿಂಗ್ ಆಪರೇಷನ್ ಗಳ ಪಿತಾಮಹ ಎಂದರೆ ಅದು ಆರ್ ಎಸ್ ಎಸ್. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಜಯ್ ಜೋಷಿ ಅವರನ್ನೇ ಸ್ಟಿಂಗ್ ಆಪರೇಷನ್ ಮೂಲಕ ಮುಗಿಸಿದ ಇತಿಹಾಸ ಇವರದ್ದು. ರಾಜಕೀಯ ಸೇಡು ತೀರಿಸಿಕೊಳ್ಳಲು ಇಂತಹ ಹಾದಿ ಹಿಡಿಯುವ ಕಲೆ ಬಿಜೆಪಿಗೆ ಕರಗತವಾಗಿದೆ. ಕಾಂಗ್ರೆಸ್ ನಲ್ಲಿ ಸ್ಲೀಪರ್ ಸೆಲ್ ಗಳಿಲ್ಲ, ಬದಲಾಗಿ ಬಿಜೆಪಿ ಮತ್ತು ಸಂಘ ಪರಿವಾರದಲ್ಲೇ ಅಂತಹ ದೇಶದ್ರೋಹಿ ಮತ್ತು ಪಕ್ಷದ್ರೋಹಿ ಶಕ್ತಿಗಳು ಅಡಗಿವೆ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ಪಕ್ಷದ ಆಂತರಿಕ ಶಿಸ್ತಿನ ಬಗ್ಗೆ ಎಚ್ಚರಿಕೆ ನೀಡಿರುವ ಅವರು, ಸ್ಟಿಂಗ್ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಕೃಪಾ ಆಳ್ವಾ ಸೇರಿದಂತೆ ಯಾರೇ ಆಗಿರಲಿ, ಪಕ್ಷದ ಘನತೆಗೆ ಧಕ್ಕೆ ತಂದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಅವರಿಗೆ ಈಗಾಗಲೇ ನೋಟಿಸ್ ನೀಡಲು ಸೂಚಿಸಲಾಗಿದೆ. ಸಿದ್ಧರಾಮಯ್ಯನವರನ್ನು ಬ್ಲಾಕ್ ಮೇಲ್ ಮಾಡಲು ನಡೆಸಿರುವ ಈ ಬ್ರಹ್ಮಾಂಡ ಷಡ್ಯಂತ್ರದ ತನಿಖೆ ಮುಗಿದ ತಕ್ಷಣ ಸತ್ಯ ಹೊರಬರಲಿದೆ. ಕಾಂಗ್ರೆಸ್ ಎಂದಿಗೂ ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಬಗ್ಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗ, ಉತ್ತರ ಕನ್ನಡ ಮತ್ತು ಬೆಳಗಾವಿಯಂತಹ ಕ್ರಾಂತಿಕಾರಿ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹರಿಪ್ರಸಾದ್ ನೆನಪಿಸಿಕೊಂಡಿದ್ದಾರೆ. ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಪವಿತ್ರ ಸ್ಥಳಗಳನ್ನು ಸಂರಕ್ಷಿಸಿ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವಾಗಬೇಕು. ಕಾಗೋಡು ಹೋರಾಟ ಮತ್ತು ರೈತ ಚಳವಳಿಗಳ ಸೈದ್ಧಾಂತಿಕ ಬುನಾದಿಯನ್ನು ಗಟ್ಟಿಗೊಳಿಸಲು ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಹರಿಪ್ರಸಾದ್ ಅವರ ಈ ಹೇಳಿಕೆಗಳು ಬಿಜೆಪಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದು, ಸೈದ್ಧಾಂತಿಕ ಸಮರಕ್ಕೆ ಹೊಸ ವೇದಿಕೆ ಒದಗಿಸಿದೆ.







