ಚಿನ್ನದ ಬರ ನೀಗಿಸಿದ ಸುನೀಲ್: ಕನ್ನಡಿಗ ಅರ್ಜುನ್ ಗೆ ಕಂಚು
ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ
55ಕೆಜಿ ವಿಭಾಗದಲ್ಲಿ ಕನ್ನಡಿಗ ಅರ್ಜುನ್ ಹಲಕುರ್ಕಿಗೆ ಕಂಚು
ಭಾರತದ ಕುಸ್ತಿಪಟು ಸುನೀಲ್ ಕುಮಾರ್ ಅವರು 87 ಕೆ.ಜಿ. ವಿಭಾಗದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಈ ಮೂಲಕ ಭಾರತದ 27 ವರ್ಷಗಳ ಪ್ರಶಸ್ತಿ ಬರ ನೀಗಿಸಿದ್ದಾರೆ. ಕೆಡಿ ಜಾಧವ್ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಗ್ರೀಕೊ-ರೋಮನ್ ಸ್ಪರ್ಧೆಯಲ್ಲಿ ಸುನೀಲ್ ಕುಮಾರ್ ಕಿರ್ಗಿಸ್ಥಾನದ ಅಜಾತ್ ಸಾಲಿಡಿನೊವ್ ಅವರನ್ನು 5-0 ಯಿಂದ ಮಣಿಸಿದರು. ಈ ಮೂಲಕ ಆತಿಥೇಯ ಭಾರತಕ್ಕೆ ಟೂರ್ನಿಯ ಮೊದಲ ದಿನವೇ ಚಿನ್ನದ ಪದಕ ತಂದುಕೊಟ್ಟರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ಸುನೀಲ್ ಕುಮಾರ್ ಅವರು, ಕಝಕಿಸ್ತಾನ್ ಸ್ಪರ್ಧಿಯ ವಿರುದ್ಧ 12-8 ಅಂಕಗಳಿಂದ ಜಯ ಸಾಧಿಸಿದ್ದರು.
ಇನ್ನು ಪಪ್ಪು ಯಾದವ್ 1993ರಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ ರೋಮನ್ ಶೈಲಿಯಲ್ಲಿ ಭಾರತ ಗೆದ್ದ ಮೊಟ್ಟಮೊದಲ ಚಿನ್ನದ ಪದಕ ಇದಾಗಿದೆ.
ಅರ್ಜುನ್ ಹಲಕುರ್ಕಿಗೆ ಕಂಚು
ಕನ್ನಡಿಗ ಅರ್ಜುನ್ ಹಲಕುರ್ಕಿ ಪುರುಷರ 55ಕೆಜಿ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದಾರೆ. ಸೀನಿಯರ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಕರ್ನಾಟಕದ ಕುಸ್ತಿಪಟು ಗೆದ್ದ ಮೊದಲ ಪದಕ ಇದಾಗಿದೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕನ್ನಡಿಗ ಅರ್ಜುನ್, ಕೊರಿಯಾದ ಡಾಂಗ್ಯೊಕ್ ಅವರನ್ನು 7-4 ರಿಂದ ಮಣಿಸಿ ಪದಕಕ್ಕೆ ಕೊರಳೊಡಿದ್ದಾರೆ.ಈ ಮೂಲಕ ಭಾರತಕ್ಕೆ ಮೊದಲ ದಿನ 2ನೇ ಪದಕ ತಂದುಕೊಟ್ಟಿದ್ದಾರೆ.








