ಮುಂಬೈ: ಕಾರು ಕಂಪನಿಗಳು ಖರೀದಿದಾರರಿಗೆ ಗುಡ್ ನ್ಯೂಸ್ ಘೋಷಿಸಿವೆ. ಕಾರು ಉತ್ಪಾದನಾ ಕಂಪನಿಗಳು (Car Manufacturing Companies) ಈಗ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ (Discounts), ಎಕ್ಸ್ಚೇಂಜ್ ಬೋನಸ್, ಖಾತರಿ ಗಿಫ್ಟ್ ನೀಡಲು ಮುಂದಾಗಿವೆ.
ಶೇ. 5 ರಿಂದ 10ರಷ್ಟು ದರ ಕಡಿಮೆ ಮಾಡಿದ್ದು, ಕಳೆದ ಐದು ವರ್ಷಗಳಲ್ಲಿ ಇಷ್ಟೊಂದು ಆಫರ್ ಮೊದಲ ಬಾರಿಗೆ ನೀಡಿವೆ. ದೀಪಾವಳಿವರೆಗೂ (Deepavali) ಈ ಆಫರ್ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 2023-24ರ ಹಣಕಾಸು ವರ್ಷದಲ್ಲಿ ಕಾರು ಮಾರಾಟ ಭರ್ಜರಿ ಏರಿಕೆ ಕಂಡಿತ್ತು. ಆದರೆ ಈ ವರ್ಷ ನಿರಾಶದಾಯಕವಾಗಿದೆ. ಹೀಗಾಗಿ ಕಂಪನಿಗಳು ಗ್ರಾಹಕರಿಗಾಗಿ ಆಫರ್ ಘೋಷಣೆ ಮಾಡಿವೆ.
ಸಾಮಾನ್ಯವಾಗಿ ಡಿಸೆಂಬರ್ ಅಥವಾ ಪ್ರಮುಖ ಹಬ್ಬದ ಸಂದರ್ಭದಲ್ಲಿ ಈ ರೀತಿಯ ರಿಯಾಯಿತಿ, ಆಫರ್ಗಳನ್ನು ಕಂಪನಿಗಳು ಪ್ರಕಟಿಸುತ್ತವೆ. ಈ ಬಾರಿ ಜೂನ್ ತಿಂಗಳಿನಲ್ಲೇ ರಿಯಾಯಿತಿಗಳು ಪ್ರಕಟವಾಗಿರುವುದು ವಿಶೇಷ. ಟಾಟಾ ಮೋಟಾರ್ಸ್ – 25,000 ರೂ. ನಿಂದ 1,00,000 ರೂ.ವರೆಗೆ, ಹೋಂಡಾ ಕಾರ್ಸ್ – 55,000 ರೂ.ನಿಂದ 1,00,000 ರೂ.ವರೆಗೆ, ಮಾರುತಿ ಸುಜುಕಿ – 55,000 ರೂ. ನಿಂದ 95,000 ರೂ.ವರೆಗೆ ರಿಯಾಯತಿ ಘೋಷಿಸಿವೆ ಎಂದು ತಿಳಿದು ಬಂದಿದೆ.
ನೆಕ್ಸಾನ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ 1 ಲಕ್ಷ ರೂ.ವರೆಗೆ ಆಫರ್ ಪ್ರಕಟಿಸಿದೆ. ಮಾರುತಿ ಸುಜುಕಿ ಫ್ರಾಂಕ್ಸ್ಗೆ 72,000 ರೂ.ವರೆಗೆ ಮತ್ತು ಗ್ರಾಂಡ್ ವಿಟಾರಾದಲ್ಲಿ 95,000 ರೂ.ವರೆಗೆ ರಿಯಾಯತಿ ದರ ಪ್ರಕಟಿಸಿದೆ. ಸ್ಕೋಡಾ ಕಂಪನಿಯ Slavia ಕಾರಿಗೆ 94,000 ರೂ. ದರ (ಎಕ್ಸ್ ಶೋರೂಂ ದರ 10.69 ಲಕ್ಷ ರೂ.) ರಿಯಾಯಿತಿ ಘೋಷಿಸಿದೆ.