ಮೆಟ್ರೋ ಪ್ರಯಾಣಿಕರು ಬಹುಕಾಲದಿಂದ ನಿರೀಕ್ಷಿಸುತ್ತಿರುವ ಯೆಲ್ಲೋ ಲೈನ್ ಮೆಟ್ರೋ ಸಂಚಾರದ ಕುರಿತು BMRCL (ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್) ಹೊಸ ಮಾಹಿತಿ ನೀಡಿದೆ. ಈಗಾಗಲೇ ಹಲವು ಬಾರಿ ಲೈನ್ ಉದ್ಘಾಟನೆ ದಿನಾಂಕವನ್ನು ಮುಂದೂಡಲಾಗಿತ್ತು. ಆದರೆ, ಇದೀಗ BMRCL ಇದೇ ಜುಲೈಯೊಳಗೆ ಯೆಲ್ಲೋ ಲೈನ್ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಅಧಿಕೃತವಾಗಿ ತಿಳಿಸಿದೆ.
ಹಳದಿ ಮಾರ್ಗದ ನಿರ್ಮಾಣ ಕಾರ್ಯದ ವೇಳೆ ಹಲವು ತಾಂತ್ರಿಕ ಕಾರಣಗಳಿಂದಾಗಿ ಯೋಜನೆ ನಿರಂತರವಾಗಿ ವಿಳಂಬಗೊಂಡಿತ್ತು. ಆದರೂ, ಈಗ ಬಿಎಂಆರ್‌ಸಿಎಲ್ ಕೆಲಸವನ್ನು ವೇಗಗೊಳಿಸಿದ್ದು, ಯೋಜನೆಯನ್ನು ಬೇಗನೆ ಪೂರ್ಣಗೊಳಿಸಲು ಹರಸಾಹಸಪಡುತ್ತಿದೆ.
BMRCL ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯಕ್ಕೆ ಒಂದು ಮೆಟ್ರೋ ರೈಲು ಸಂಸ್ಥೆಗೆ ಲಭ್ಯವಾಗಲಿದ್ದು, ಬಳಿಕ ಜುಲೈ ಅಂತ್ಯದೊಳಗೆ ಲೈನ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಉದ್ದೇಶವಿದೆ.
ಪ್ರಯಾಣಿಕರಿಗೆ ಅನುಕೂಲ: ಟ್ರಾಫಿಕ್ ಸಮಸ್ಯೆಗೆ ಪರಿಹಾರ
ಯೆಲ್ಲೋ ಲೈನ್ ಕಾರ್ಯಾರಂಭವಾದರೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಈ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುವ ಸಾಧ್ಯತೆ ಇದೆ. ಇದರಿಂದ ಮೆಟ್ರೋ ಪ್ರಯಾಣ ಇನ್ನಷ್ಟು ಸುಗಮವಾಗಲಿದೆ.