ಕ್ಯಾಸಿನೋ ಪ್ರಾರಂಭದ ಪ್ರಸ್ತಾಪಕ್ಕೆ ತೀವ್ರವಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ಯಾಸಿನೋ ಪ್ರಸ್ತಾಪವನ್ನು ಸರಕಾರ ಕೈಬಿಟ್ಟಿದೆ. ಯಾವುದೇ ಕಾರಣಕ್ಕೂ ಕ್ಯಾಸಿನೋಗೆ ನಮ್ಮ ರಾಜ್ಯದಲ್ಲಿ ಅನುಮತಿ ಕೊಡುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಸ್ಪಷ್ಟಪಡಿಸಿದ್ದಾರೆ. ಈ ಮೊದಲು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕ್ಯಾಸಿನೋ ಆರಂಭಿಸುವುದು ಉತ್ತಮವೆಂದಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಯುಟರ್ನ್ ಹೊಡೆದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಕ್ಯಾಸಿನೋ ನಮ್ಮ ರಾಜ್ಯದ ಸಂಸ್ಕೃತಿಗೆ ಸರಿ ಹೊಂದುವುದಿಲ್ಲ. ಅಕ್ಕಪಕ್ಕದ ರಾಜ್ಯಗಳ ಮತ್ತು ಬೇರೆ ದೇಶಗಳ ಕ್ಯಾಸಿನೋ ಸಂಸ್ಕೃತಿ ಬಗ್ಗೆ ಚರ್ಚೆ ಆಗಿತ್ತು. ಆದರೆ ಕರ್ನಾಟಕದಲ್ಲಿ ಕ್ಯಾಸಿನೋ ಆರಂಭಿಸಲು ನಾನು ಒಪ್ಪಿಗೆ ನೀಡಿಲ್ಲ ಎಂದು ಮಾಹಿತಿ ನೀಡಿದರು. ಆವತ್ತಿನ ಸಭೆಯಲ್ಲಿನ ಅರ್ಧ ಮಾಹಿತಿ ಮಾತ್ರ ಮಾಧ್ಯಮಗಳಲ್ಲಿ ಬಂದಿದೆ. ನಾನು ಅವತ್ತೇ ಕ್ಯಾಸಿನೋ ಜಾರಿಗೆ ತರೊಲ್ಲ ಅಂತ ಹೇಳಿದ್ದೆ. ಕೆಲವರು ಸುಮ್ಮನೆ ಅಪ ಪ್ರಚಾರಕ್ಕಾಗಿ ಇಂತಹ ಆರೋಪ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕ್ಯಾಸಿನೋ ಆರಂಭಿಸಲು ಅನುಮತಿ ಕೊಡುವುದಿಲ್ಲ ಎಂದು ಸಚಿವರು ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕೆಲ ಜೂಜುಕೋರರ ಬೆಂಬಲವೇ ಕಾರಣ. ಹಾಗಾಗಿ ಅವರನ್ನು ಸಮಾಧಾನ ಪಡಿಸಲು ಕ್ಯಾಸಿನೋ ಜಾರಿಗೆ ತರಲು ಸರ್ಕಾರ ಮುಂದಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ವಿರೋಧ ಮಾಡಿದ್ದಾರೋ ಅವರೇ ನಮಗೆ ಬೆಂಬಲ ಕೊಟ್ಟಿದ್ದಾರೆ. ಹೆಸರು ಹೇಳಿದರೆ ಅವರಿಗೆ ಅವಮಾನ ಆಗುತ್ತೆ. ಅದಕ್ಕೆ ನಾನು ಹೆಸರು ಹೇಳುವುದಿಲ್ಲ ಎಂದು ವಿರೋಧ ಮಾಡುವವರಿಗೆ ತಿರುಗೇಟು ಕೊಟ್ಟರು.