ಕಂಬಳದಲ್ಲಿ ಉಸೇನ್ ಬೋಲ್ಟ್ ಅವರ ದಾಖಲೆ ಹಿಂದಿಕ್ಕಿ 100 ಮೀಟರ್ ಅಂತರವನ್ನು ಕೇವಲ 9.5 ಸೆಕೆಂಡ್ ಗಳಲ್ಲಿ ಕ್ರಮಿಸಿದ ಶ್ರೀನಿವಾಸ್ ಗೌಡ ಸದ್ಯದ ಟಾಕ್ ಆಪ್ ದಿ ಟೌನ್. ಗಲ್ಲಿಯಿಂದ ದಿಲ್ಲಿಯವರೆಗೆ ಶ್ರೀನಿವಾಸ್ ಅವರ ಹೆಸರು ಕೇಳಿಬರುತ್ತಿದೆ. ಹೀಗೆ ಖ್ಯಾತಿ ಪಡೆದ ಶ್ರೀನಿವಾಸ ಗೌಡ ಅವರನ್ನು ಸಚಿವ ಸಿ.ಟಿ ರವಿ, ಶಿವರಾಮ್ ಹೆಬ್ಬಾರ್ ಅವರು ತಮ್ಮ ಪ್ರಚಾರಕ್ಕೆ ಬಳಸಿಕೊಂಡ್ರಾ ಎಂಬ ಪ್ರಶ್ನೆ ಈಗ ಕಾಡುತ್ತಿದೆ.
ಖಾಲಿ ಕವರ್ ನೀಡಿದ್ದೇಕೆ ಸರ್ಕಾರ?
ಶ್ರೀನಿವಾಸ್ ಅವರ ಹೆಸರು ದೆಹಲಿಯವರೆಗೂ ತಲುಪುತ್ತಿದ್ದಂತೆ ರಾಜ್ಯ ಸರಕಾರ, ಕಂಬಳ ವೀರ ಶ್ರೀನಿವಾಸ ಗೌಡ ಅವರಿಗೆ ಸನ್ಮಾನ ಮಾಡುವ ನಿಟ್ಟಿನಲ್ಲಿ ಇಂದು ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸಿಎಂ ಯಡಿಯೂರಪ್ಪ ಸನ್ಮಾನ ಮಾಡಿದ್ದಾರೆ. ಆದರೆ, ಈ ಕಾರ್ಯಕ್ರಮದಲ್ಲಿ ಶ್ರೀನಿವಾಸ ಗೌಡ ಅವರಿಗೆ ಚೆಕ್ ರಹಿತ ಕವರ್ ನೀಡಲಾಗಿದೆ ಎನ್ನಲಾಗಿದೆ.
ಕವರ್ ನೀಡುವ ವೇಳೆ ಖಾಲಿ ಚೆಕ್ ಎಂದು ಸಚಿವ ಸಿ.ಟಿ. ರವಿ, ಕೈ ಸನ್ನೆ ಮಾಡಿದರೆ, ಅದಕ್ಕೆ ಸರಿ ಎಂದು ತಲೆ ಅಲ್ಲಾಡಿಸಿರುವ ಸಚಿವ ಶಿವರಾಮ್ ಹೆಬ್ಬಾರ್ ಖಾಲಿ ಕವರ್ ಅನ್ನೇ ಶ್ರೀನಿವಾಸ ಗೌಡ ಅವರಿಗೆ ನೀಡಿ ಪೋಟೋಗೆ ಫೋಸ್ ನೀಡಿ ಹೊರಟಿದ್ದಾರೆ. ಆದರೆ, ಕಾರ್ಯಕ್ರಮ ಮುಗಿದ ಅರ್ಧ ಗಂಟೆಯ ನಂತರ ಶ್ರೀನಿವಾಸ್ ಅವರಿಗೆ 3 ಲಕ್ಷದ ಚೆಕ್ ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.








