ಬೆಂಗಳೂರು : ಕಳೆದ ಒಂದೂವರೆ ತಿಂಗಳಿನಿಂದ ಸ್ಥಗಿತಗೊಂಡಿರುವ ಸಿನಿಮಾ ಕೆಲಸಗಳಿಗೆ ಸರ್ಕಾರ ಕೊನೆಗೂ ಗ್ರೀನ್ ಸಿಗ್ನಲ್ ನೀಡಿದೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಆದೇಶವನ್ನು ಸರ್ಕಾರ ನೀಡಲಿದ್ದು, ಕೆಲವು ಷರತ್ತುಗಳನ್ನೂ ವಿಧಿಸುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್, ನಿರ್ಮಾಪಕ ಕೆ. ಮಂಜು ಮುಂತಾದವರು ಕಂದಾಯ ಸಚಿವರನ್ನ ಭೇಟಿ ಮಾಡಿ, ಸಿನಿಮಾದ ಒಳಾಂಗಣ ಕೆಲಸಗಳಿಗಾದರೂ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾಗಳ ಒಳಾಂಗಣ ಕೆಲಸಕ್ಕೆ ಅನುಮತಿಯನ್ನು ಸರ್ಕಾರ ಕೊಟ್ಟಿದೆ.
ಶೂಟಿಂಗ್ ಗೆ ಇಲ್ಲ ಅನುಮತಿ..!
ಚಲನಚಿತ್ರ ಕೆಲಸಗಳಿಗೆ ಸರ್ಕಾರ ಅನುಮತಿ ನೀಡಿದ್ದರೂ ಚಿತ್ರೀಕರಣಕ್ಕೆ ಮಾತ್ರ ಅವಕಾಶ ನೀಡಿಲ್ಲ. ಅದರ ಬದಲಿಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್ ಕೆಲಸಗಳಿಗೆ ಅವಕಾಶ ನೀಡಲಾಗಿದೆ. ಜೊತೆಗೆ ಎಡಿಟಿಂಗ್, ಮಿಕ್ಸಿಂಗ್, ಗ್ರಾಫಿಕ್ಸ್ ಈ ರೀತಿಯ ಕೆಲಸ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಇಂದಿನಿಂದಲೇ ಕೆಲಸ ಆರಂಭಿಸಬಹುದು ಅಂತಾ ಹೇಳಿದ್ದಾರೆ ಆರ್. ಅಶೋಕ್. ಇನ್ನು ಸಿನಿಮಾ ಒಳಾಂಗಣ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ಕೊಟ್ಟ ಹಿನ್ನೆಲೆ, ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕ ಸಂಘ ಧನ್ಯವಾದ ತಿಳಿಸಿದೆ.








