ಈ ಬಾರಿ ಗಣೇಶ ಚತುರ್ಥಿಯ ಅದ್ದೂರಿ ಉತ್ಸವಕ್ಕೆ ಕೊರೋನಾ ಸೋಂಕು ಅಡ್ಡಿಯಾಗಿದೆ. ರಾಜ್ಯ ಸರ್ಕಾರ ಈ ವರ್ಷ ಗಲ್ಲಿ ಬೀದಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಬಾರದು ಎಂದು ಆದೇಶ ಹೊರಡಿಸಿ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು, ಅಗಸ್ಟ್15: ಈ ಬಾರಿ ಗಣೇಶ ಚತುರ್ಥಿಯ ಅದ್ದೂರಿ ಉತ್ಸವಕ್ಕೆ ಕೊರೋನಾ ಸೋಂಕು ಅಡ್ಡಿಯಾಗಿದೆ. ರಾಜ್ಯ ಸರ್ಕಾರ ಈ ವರ್ಷ ಗಲ್ಲಿ ಬೀದಿಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಬಾರದು ಎಂದು ಆದೇಶ ಹೊರಡಿಸಿದ್ದು, ಗಣೇಶ ಹಬ್ಬವನ್ನು ಸರಳವಾಗಿ ಹೇಗೆ ಆಚರಿಸಬೇಕು ಮತ್ತು ಗಣೇಶ ಮೂರ್ತಿಯನ್ನು ಹೇಗೆ ವಿಸರ್ಜಿಸಬೇಕು ಎಂಬ ಬಗ್ಗೆ 10 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಯ ವಿವರ
1. ಗಣೇಶ ಹಬ್ಬವನ್ನು ಈ ವರ್ಷ ಸರಳವಾಗಿ, ಭಕ್ತಿಪೂರ್ವಕವಾಗಿ ದೇವಸ್ಥಾನದಲ್ಲಿ ಅಥವಾ ಮನೆಗಳಲ್ಲೇ ಆಚರಿಸುವುದು.
2. ಈ ಬಾರಿ ಗಣೇಶೋತ್ಸವದಂದು ಸಾರ್ವಜನಿಕ ಸ್ಥಳ(ರಸ್ತೆ, ಗಲ್ಲಿ, ಓಣಿ, ಮೈದಾನ ಇತ್ಯಾದಿ)ಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಬಾರದು.
3. ಯಾವುದೇ ಕಾರಣಕ್ಕೂ ಸಾರ್ವಜನಿಕ ನದಿ, ಕೆರೆ, ಕೊಳ, ಬಾವಿ ಹಾಗೂ ಕಲ್ಯಾಣಿಗಳಲ್ಲಿ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಬಾರದು.
4. ಗಣೇಶ ಹಬ್ಬದಂದು ಮೂರ್ತಿ ಪ್ರತಿಷ್ಟಾಪನೆ ಅಥವಾ ವಿಸರ್ಜನೆಯ ಸಮಯದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿಯೂ ಮೆರವಣಿಗೆಯಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
5. ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಗಳನ್ನು ಮನೆಯ ಆವರಣದಲ್ಲಿಯೇ ವಿಸರ್ಜಿಸಬೇಕು.

6. ಗಣೇಶೋತ್ಸವ ಆಚರಿಸುವ ದೇವಸ್ಥಾನಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸೇಷನ್ ಮಾಡುವುದು ಕಡ್ಡಾಯ. ಗಣೇಶನ ದರ್ಶನಕ್ಕಾಗಿ ಆಗಮಿಸುವ ಭಕ್ತರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಡ್ಡಾಯ. ಅಷ್ಟೇ ಅಲ್ಲ ಭಕ್ತರು ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಕಡ್ಡಾಯ. ದೇವರ ದರ್ಶನಕ್ಕೆ ಆಗಮಿಸುವ ಭಕ್ತರು ಹ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.
7. ಕೊರೊನಾ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ದಳ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆಗಳಿಂದ ಹೊರಡಿಸಿದ ಸೂಚನೆ, ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು.
8. ಗಣೇಶೋತ್ಸವ ಆಚರಣೆಯಲ್ಲಿ ಸಂದರ್ಭಕ್ಕನುಗುಣವಾಗಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆ, ಪ್ರಾಧಿಕಾರಗಳಿಂದ ಹೊರಡಿಸಲಾದ ಎಲ್ಲ ಆದೇಶ, ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
9. ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯ ಉಂಟಾಗಲು ಪೂಕವಾಗಿರುವುದರಿಂದ ಗಣೇಶ ಹಬ್ಬವನ್ನು ಅದೇ ರೀತಿ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು.
10. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಅಡಿ ಶಿಸ್ತು, ಕಾನೂನು ಕ್ರಮ ಹಾಗೂ ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು.








