ಬೆಂಗಳೂರು: ಸರ್ಕಾರ ನಕಲಿ ವೈದ್ಯರ (Fake Doctor) ವಿರುದ್ಧ ಸಮರ ಸಾರಿದೆ.
ರಾಜ್ಯದಲ್ಲಿ ಇತ್ತೀಚೆಗೆ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣ ಕಮಕನೂರು, ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದೆ. ನೂರಾರು ಜನ ನಕಲಿ ವೈದ್ಯರ ಚಿಕಿತ್ಸೆಯಿಂದ ಸತ್ತು ಹೋಗಿದ್ದಾರೆ. ಇದರಲ್ಲಿ ಅಲ್ಲಿನ ಡಿಹೆಚ್‌ಒ ಶಾಮೀಲಾಗಿದ್ದಾರೆ. ಹೀಗಾಗಿ ಕೂಡಲೇ ಸಮಿತಿ ರಚಿಸಿ ನಕಲಿ ವೈದ್ಯರ ವಿರುದ್ಧ ಸಮರ ಸಾರಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಕಲಿ ವೈದ್ಯರನ್ನ ಹುಡುಕಿ ಅವರ ಕ್ಲಿನಿಕ್ ಬಂದ್ ಮಾಡಿಸುವ ಕೆಲಸ ಮತ್ತು ಅವರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸ ಮಾಡಲಾಗುತ್ತಿದೆ. ಅಯುಷ್ ವೈದ್ಯರು ಕ್ಲಿನಿಕ್ ಮುಂದೆ ಗ್ರೀನ್ ಬೋರ್ಡ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಇಂಗ್ಲಿಷ್ ಔಷಧಿ ನೀಡುವ ಕ್ಲಿನಿಕ್‌ನವರು ನೀಲಿ ಬೋರ್ಡ್ ಹಾಕಲು ಕಡ್ಡಾಯವಾಗಿ ಸೂಚನೆ ನೀಡಲಾಗಿದೆ. ನಕಲಿ ವೈದ್ಯರಿಗೆ 3 ವರ್ಷ ಜೈಲು ಶಿಕ್ಷೆಯೂ ನಿಯಮದಲ್ಲಿ ಇದೆ.1 ಲಕ್ಷ ರೂ. ದಂಡ ವಿಧಿಸುವ ನಿಯಮ ಇದೆ. ಕೆಲವು ರಾಜಕಾರಣಿಗಳೇ ನಕಲಿ ವೈದ್ಯರನ್ನು ಬಿಡಿಸುತ್ತಿದ್ದಾರೆ. ಆದರೂ ನಮ್ಮ ಸರ್ಕಾರ ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.








