ಅಕೇಶಿಯ ನೆಡುತೋಪು ಮಲೆನಾಡಿಗೆ ಬೇಡ ಹೋರಾಟ ಸಮಿತಿಯಿಂದ ಸರ್ಕಾರಕ್ಕೆ ಎಚ್ಚರಿಕೆ:
ಶಿವಮೊಗ್ಗ: ಭದ್ರಾವತಿಯ ಕಾಗದ ಕಾರ್ಖಾನೆ ಎಂಪಿಎಂ ಗೆ ಸೇರಿದ್ದ ಸುಮಾರು 82 ಸಾವಿರ ಎಕರೆ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಸರ್ಕಾರ ತಕ್ಷಣವೇ ಅದನ್ನು ವಾಪಾಸ್ ಪಡೆದು ಸಹಜ ಅರಣ್ಯ ಬೆಳೆಸಬೇಕು ಎಂದು ‘ನಮ್ಮೂರಿಗೆ ಅಕೇಶಿಯಾ ಮರ ಬೇಡ ಹೋರಾಟ ಒಕ್ಕೂಟ’ ಆಗ್ರಹಿಸಿದೆ. ಇಂದು ಶಿವಮೊಗ್ಗ ಪ್ರೆಸ್ಟ್ರಸ್ಟ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಪೂರ್ವಭಾವಿ ಸಭೆಯಲ್ಲಿ ಈ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.
ಮುಖ್ಯವಾಗಿ ಮಲೆನಾಡಿನ ಕಾಡು, ನೆಲ, ಜಲದ ಮೇಲೆ ಹಕ್ಕು ಮಲೆನಾಡಿಗರಿಗೆ ಸೇರಿದ್ದು. ಅಲ್ಲಿ ನೈಸರ್ಗಿಕ ಅರಣ್ಯ ಬೆಳೆಯಬೇಕೇ ವಿನಃ ಅರಣ್ಯ ಇಲಾಖೆಗೆ, ಸರ್ಕಾರಕ್ಕೆ ಲಾಭಕೋರ ದಂಧೆ ಮಾಡುವ ಉದ್ಯಮವಾಗಬೇಕಿಲ್ಲ. ಹಸಿರು ಬೆಳೆಯಬೇಕಾದ ಜಾಗದಲ್ಲಿ ಕೆಲವರ ಹಿತಾಸಕ್ತಿಗಾಗಿ ಹಣ ಬೆಳೆಯಬೇಕಾಗಿಲ್ಲ. ವಿವಿಧ ಕಾರಣದಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಮಲೆನಾಡಿನಲ್ಲಿ ಕಾಡು ಮರೆಯಾಗುತ್ತಿರುವಾಗ ಬರೋಬ್ಬರಿ 80 ಸಾವಿರ ಎಕರೆ ಕಾಡು ಬೆಳೆಸುವ ಅವಕಾಶವನ್ನು ಮಲೆನಾಡಿಗರು ಕಳೆದುಕೊಳ್ಳಲು ಸಿದ್ಧರಿಲ್ಲ. ಹಾಗಾಗಿ ಸರ್ಕಾರ, ಎಂಪಿಎಂ ಲೀಜ್ ಅವಧಿ ಮುಗಿಯುತ್ತಿದ್ದಂತೆ ಆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಮತ್ತು ಅಲ್ಲಿ ನೈಸರ್ಗಿಕ ಕಾಡು ಬೆಳೆಯಲು ರಕ್ಷಣೆ ಒದಗಿಸಬೇಕು. ಇಲ್ಲವಾದಲ್ಲಿ ಮಲೆನಾಡಿನಾದ್ಯಂತ ಇದೊಂದು ಭಾವನಾತ್ಮಕ ವಿಷಯವಾಗಿ ಆಂದೋಲನೋಪಾದಿಯಲ್ಲಿ ಹೋರಾಟ ಭುಗಿಲೇಳಲಿದೆ ಎಂದು ವೇದಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.
ಹೋರಾಟದ ಸ್ವರೂಪದ ಕುರಿತು ಸುದೀರ್ಘ ಚರ್ಚೆ ನಡೆಸಿದ ಒಕ್ಕೂಟ, ಆ ಕುರಿತ ಹಲವು ನಿರ್ಣಯಗಳನ್ನು ಅಂಗೀಕರಿಸಿ, ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿತು. ಈ ಇರುವ ಭೂಮಿಯಲ್ಲಿ ನೈಸರ್ಗಿಕ ಅರಣ್ಯ ಬೆಳೆಸಲು ಒತ್ತು ನೀಡುವುದು, ಅರಣ್ಯ ಬೆಳೆಸಲು ಸಾದ್ಯವಿರದ ಕಡೆ ಭೂರಹಿತರಿಗೆ ನೀಡಿ ಅಲ್ಲಿ ಕಾಡುಬೆಳೆ ಬೆಳೆಸಲು ಅನುಮತಿ ನೀಡಬೇಕು, ಮತ್ತು ಅಲ್ಲಿನ ಉತ್ಪನ್ನಗಳ ಲಾಭವನ್ನು ಆ ರೈತರಿಗೆ ನೀಡಬೇಕು. ಜಿಲ್ಲಾಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳಲ್ಲಿ ಗುತ್ತಿಗೆ ವಿಸ್ತರಣೆ ಮತ್ತು ನೆಡುತೋಪು ವಿರುದ್ಧ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಬೇಕು. ಅಂತಿಮವಾಗಿ ಜನ ಹೋರಾಟಕ್ಕೆ ಸರ್ಕಾರ ಮಣಿಯದೇ ಹೋದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ದರಾಗಬೇಕು. ಕಾಡು ಮತ್ತು ಜೀವವೈವಿಧ್ಯ ಸೇವೆಗಳಿಗೆ ಬೆಲೆಕಟ್ಟಬೇಕು. ಮಲೆನಾಡಿಗರ ನಮ್ಮಭೂಮಿ ನಮ್ಮ ಹಕ್ಕು ಸ್ಥಾಪಿತವಾಗಬೇಕು. ಭೂಮಿ ಒಂದು ಭಾವನಾತ್ಮಕ ವಿಷಯ. ನಮ್ಮ ಭೂಮಿಯಲ್ಲಿ ಯಾರಿಗೂ ದಂಧೆ ಮಾಡಲು ಅವಕಾಶವಿಲ್ಲ. ಇವು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳಾಗಿವೆ.
ಎಂಪಿಎಂ ಕಾರ್ಖಾನೆ ನಡೆಯುತ್ತಿರುವಾಗ ಸರ್ಕಾರ ಪಶ್ಚಿಮಘಟ್ಟದ ಹಲವು ಕಡೆ ಸುಮಾರು 82 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನ 40 ವರ್ಷಗಳ ಅವಧಿಗೆ ಎಂಪಿಎಂ ನೆಡುತೋಪು ನಿರ್ಮಾಣಕ್ಕೆ ನೀಡಿತ್ತು. ಆದರೆ ಈ ಗುತ್ತಿಗೆ ಅವಧಿ ಇದೇ ಆಗಸ್ಟ್ 12ಕ್ಕೆ ಮುಗಿದಿದೆ ಮತ್ತು ಕಾರ್ಖಾನೆಯೂ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಮುಂದುವರೆಸದೇ ಮತ್ತು ಅಲ್ಲಿ ನೀಲಗಿರಿ ತೋಪು ಬೆಳೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಸರ್ಕಾರ ತಕ್ಷಣವೇ ಈ ನೆಡುತೋಪನ್ನು ವಶಪಡಿಸಿಕೊಂಡು ಇಲ್ಲಿ ಸ್ವಾಭಾವಿಕ ಅರಣ್ಯವನ್ನು ಬೆಳೆಸಬೇಕು. ಪರಿಸರ ಉಳಿಸಬೇಕು, ಮನುಷ್ಯನ ದುರಾಸೆಗೆ ಮತ್ತು ಅಭಿವೃದ್ದಿಯ ತಾಕಲಾಟದಲ್ಲಿ ಇಡೀ ಭೂಮಿಯೇ ನಾಶವಾಗುತ್ತಿದೆ. ಅದರಲ್ಲೂ ಗಣಿಗಾರಿಕೆ ಮತ್ತು ನಗರೀಕರಣ ವಿಸ್ತರಣೆಯಿಂದ ಕೃಷಿ ಭೂಮಿಯೇ ಇಲ್ಲವಾಗುತ್ತಿದೆ. ಹೀಗಾದರೆ ಮಾನವ ನಾಶವಾದಂತೆ ಸರಿ ಎಂದು ಹೇಳಿದರು.
ಸಭೆಯಲ್ಲಿ ಒಕ್ಕೂಟದ ಮುಖಂಡರಾದ ಕೆ.ಪಿ. ಶ್ರೀಪಾಲ್, ಕೆ.ಟಿ. ಗಂಗಾಧರ್, ಎಂ.ಗುರುಮೂರ್ತಿ, ಚಾರ್ವಕ ರಾಘು, ಶಶಿ ಸಂಪಳ್ಳಿ, ಅಖಿಲೇಶ್ ಚಿಪ್ಪಳಿ, ಸುರೇಶ್ ಶೆಟ್ಟಿ ಅರಸಾಳು, ಡಿ.ಮಂಜುನಾಥ್, ಟಿ.ಆರ್.ಕೃಷ್ಣಪ್ಪ, ಶಿವಮೂರ್ತಿ, ರಾಜೇಂದ್ರ ಕಂಬಳಗೆರೆ, ತೀರ್ಥಹಳ್ಳಿ, ಕಿರಣ್ , ಮಾಲತೇಶ್ ಭೊಮ್ಮನಕಟ್ಟೆ, ಪ್ರಸನ್ನ ಹಿತ್ತಲಗದ್ದೆ, ಪ್ರೀತಮ್ ದತ್ತರಾಜಪುರ, ಸಂದೀಪ ಅಕ್ಲಾಪುರ, ಅಕ್ಷತಾ ಹುಂಚದಕಟ್ಟೆ, ರಘು ಗರ್ಗೇಶ್ವರ, ಕೃಷ್ಣಮೂರ್ತಿ ಸೇರಿದಂತೆ ಹಲವರಿದ್ದರು.
ಫೋಟೋ ಮತ್ತು ವರದಿ: ಶಶಿ ಸಂಪಳ್ಳಿ
ಪತ್ರಕರ್ತರು ಮತ್ತು ಪರಿಸರ ಹೋರಾಟಗಾರರು
ಶಿವಮೊಗ್ಗ