ವಿಧಾನಸಭೆಯಲ್ಲಿ ಕೊರೊನಾ ವೈರಸ್ ಸೋಂಕಿನ ಭಯದಿಂದ ರೋಮ್ ವಿಮಾನ ನಿಲ್ದಾಣದಲ್ಲಿ ಅತಂತ್ರರಾಗಿರುವ ಕನ್ನಡಿಗರ ರಕ್ಷಣೆಯ ಭರವಸೆಯನ್ನು ಸರಕಾರ ನೀಡಿದೆ.
ಇಂದು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಇಟಲಿಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಕೇಂದ್ರ ಸರಕಾರ ಕಳೆದ ಮಾ. 14ರಂದು 220 ಮಂದಿ ವಿಮಾನದ ಮೂಲಕ ರಕ್ಷಿಸಿ ಕರೆತಂದಿದೆ. ಆದರೆ ಇನ್ನೂ 1,000 ಮಂದಿ ಇಟಲಿಯಲ್ಲೇ ಉಳಿದಿದ್ದು, ಅವರು ಯಾವುದೇ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. 1,000 ಮಂದಿ ಭಾರತೀಯರ ಪೈಕಿ 400 ಮಂದಿ ಕನ್ನಡಿಗರಾಗಿದ್ದು, ಇದರಲ್ಲಿ 150 ಮಂದಿ ವಿದ್ಯಾರ್ಥಿಗಳಾಗಿದ್ದಾರೆ. ಸೋಂಕು ಇಲ್ಲ ಎಂಬ ದೃಢೀಕರಣ ಇಲ್ಲದೆ ವಿಮಾನ ಹತ್ತಲು ಅವಕಾಶ ಕೊಡದ ಕಾರಣ ವಿಮಾನ ನಿಲ್ದಾಣಗಳಲ್ಲಿ ಅತಂತ್ರರಾಗಿ ಉಳಿದಿದ್ದಾರೆ. ರಾಯಭಾರಿ ಕಚೇರಿಯೂ ಅವರ ನೆರವಿಗೆ ಬರುತ್ತಿಲ್ಲ ಎಂದು ಸದನದ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಾ|ಸಿ.ಎನ್.ಅಶ್ವತ್ಥ ನಾರಾಯಣ, ಇಟಲಿಯ ವಿಮಾನ ನಿಲ್ದಾಣದಲ್ಲಿನ ಕನ್ನಡಿಗರ ರಕ್ಷಣೆಗೆ ಈಗಾಗಲೇ ಕೇಂದ್ರ ವಿದೇಶಾಂಗ ವ್ಯವಹಾರ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಮಿಲಾನ್ ವಿಮಾನ ನಿಲ್ದಾಣದಲ್ಲಿನ ಕನ್ನಡಿಗರ ಸಹಿತ ಭಾರತೀಯರ ಆರೋಗ್ಯ ತಪಾಸಣೆ ನಡೆದಿದೆ. ರಕ್ತ ಪರೀಕ್ಷೆ ಸಹಿತ ನಾನಾ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಸ್ಥಿತಿ ವರದಿ ಆಧರಿಸಿ ಅವರನ್ನು ಭಾರತಕ್ಕೆ ಕಳುಹಿಸುವ ಇಲ್ಲವೇ ಅಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್‌ನ ಆರ್.ವಿ.ದೇಶಪಾಂಡೆ, ಅಜಯ್ ಸಿಂಗ್, ಈಶ್ವರ ಖಂಡ್ರೆ, ಡಾ| ರಂಗನಾಥ್, ಜೆಡಿಎಸ್‌ನ ಬಂಡೆಪ್ಪ ಕಾಶೆಂಪುರ ಮತ್ತು ಇತರರು ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕೋರಿದರು.
ಇದಕ್ಕೆ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಈಗಾಗಲೇ ಕೊರೊನಾ ಸೋಂಕು ಕುರಿತು ಎರಡು ಬಾರಿ ಚರ್ಚೆಯಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಬ್ಬರೂ ರಾಜ್ಯ ಪ್ರವಾಸದಲ್ಲಿರುವ ಕಾರಣ ಈ ಕುರಿತು ಬುಧವಾರ ಚರ್ಚೆ ಕೈಗೆತ್ತಿಕೊಳ್ಳಿ ಎಂದು ಸ್ಪೀಕರ್‌ಗೆ ಸಲಹೆ ನೀಡಿದರು. ಅದರಂತೆ ಬುಧವಾರ ಚರ್ಚೆಗೆ ಅವಕಾಶ ನೀಡುವುದಾಗಿ ವಿಧಾನಸಭಾಧ್ಯಕ್ಷರು ಹೇಳುವ ಮೂಲಕ ಈ ವಿಷಯದ ಕುರಿತಾಗಿನ ಚರ್ಚೆ ಅಂತ್ಯಗೊಂಡಿತು.








