ಬಿಜಾಪುರ : ಕೊರೊನಾ ಸಂಕಷ್ಟದಿಂದ ದೃತಿಗೆಟ್ಟ ರೈತ ಸಮುದಾಯವನ್ನು ಮಿಡತೆಗಳ ಹಾವಳಿಯಿಂದ ರಕ್ಷಿಸಿಸುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಂ, ಬಿ ಪಾಟೀಲ್ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಎಂ .ಬಿ.ಪಾಟೀಲ್ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸಿದ ಎಂ.ಬಿ. ಪಾಟೀಲ್, ಜಗತ್ತು ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದೆ. ಇದೆ ಸಮಯದಲ್ಲಿ ಆಫ್ರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಈ ವರ್ಷ ಭಾರಿ ಪ್ರಮಾಣದ ಮಿಡತೆಗಳ ಸುಂಟರಗಾಳಿ ಎಬ್ಬಿಸಿ, ಬೆಳೆಗಳನ್ನು ನಾಶಮಾಡುವ ಸಾದ್ಯತೆಯಿದೆ. ಇದೀಗ ಉತ್ತರ ಭಾರತದ ರಾಜಸ್ಥಾನದಲ್ಲಿ ಪ್ರವೇಶಿಸಿ, ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದೆ. ನಂತರ ಜೈಪುರಕ್ಕೂ ಲಗ್ಗೆ ಇಟ್ಟು, ಮಧ್ಯಪ್ರದೇಶಕ್ಕೆ, ಉತ್ತರಪ್ರದೇಶದಂತಹ ರಾಜ್ಯಗಳು ಮಿಡತೆಗಳ ಹಾವಳಿಗೆ ತುತ್ತಾಗಿವೆ.
ಪಂಜಾಬ ಮತ್ತು ಗುಜರಾತ ರೈತರಿಗೂ ಕೂಡ ಎಚ್ಚರಿಕೆ ಸಂದೇಶವನ್ನು ನೀಡಲಾಗಿದೆ. ಮಿಡತೆಗಳು ಒಂದು ದಿನದಲ್ಲಿ 150ಕಿ.ಮೀ ದೂರ ಹಾರಬಲ್ಲವು. ತನ್ನ ತೂಕದಷ್ಟು ಆಹಾರವನ್ನು ಒಂದುಬಾರಿಗೆ ಸೇವಿಸಬಲ್ಲದು. ಅಲ್ಲದೇ ಈ ಮಿಡತೆಗಳ ಸೈನ್ಯ ಒಂದು ಬಾರಿಗೆ 35ಸಾವಿರ ಜನ ಆಹಾರ ಸೇವಿಸುವಷ್ಟು ಆಹಾರ ಧಾನ್ಯಗಳನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸವಷ್ಟು ಸಾಮರ್ಥ್ಯ ಹೊಂದಿವೆ ಎಂಬುದನ್ನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸದ್ಯ ಪಾಕಿಸ್ತಾನದಲ್ಲಿ ಬಾರಿ ಪ್ರಮಾಣದ ಬೆಳೆಗಳನ್ನು ಹಾನಿ ಮಾಡಿದ್ದರಿಂದ ಅಲ್ಲಿನ ಸರ್ಕಾರ ಫೆಬ್ರುವರಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ದೇಶದಲ್ಲಿ ಲಾಕ್ಡೌನ್ನಿಂದ ನಷ್ಟ ಅನುಭವಿಸಿದ ರೈತರು ಇದೀಗ ಮಿಡತಗಳ ಹಾವಳಿಯಿಂದ ನಷ್ಟ ಅನುಭವಿಸಬೇಕಾಬಹುದು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಹಾನಿ ಉಂಟಾಗುವ ಸಾದ್ಯತೆಯಿದೆ. ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಈಗಾಗಲೇ ಈ ಕುರಿತು ವರದಿ ಬಂದಿದೆ. ಮುಖ್ಯವಾಗಿ ಮುಂಬೈ-ಕರ್ನಾಟಕ ಪ್ರದೇಶ ಹಾನಿಗೊಳಗಾಗುವ ಸಂಭವ ಹೆಚ್ಚಾಗಿರುತ್ತದೆ. ಆದ್ದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಿಡತೆಗಳ ಹಾವಳಿಯಿಂದ ಎದುರಾಗುವ ನಷ್ಟಗಳ ಕುರಿತು ಸಮೀಕ್ಷೆ ಮಾಡಿ, ಮಿಡತೆ ಹಾವಳಿಯಿಂದ ರಕ್ಷಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.