ಕೊರೊನಾ ಸೋಂಕಿತರಿಗೆ ಸರ್ಕಾರ ಸೂಚಿಸಿದ ಊಟ – ಉಪಹಾರದ ಮಾರ್ಗಸೂಚಿ
ಬೆಂಗಳೂರು, ಜುಲೈ 2: ಜಿಲ್ಲಾ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಕೊವಿಡ್ ಕೇರ್ ಕೇಂದ್ರ ಹಾಗೂ ಕೊವಿಡ್ ಕೇರ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಪೌಷ್ಠಿಕ ಆಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಉಪಹಾರವನ್ನು 7 ಗಂಟೆಗೆ, ಮಧ್ಯಾಹ್ನದ ಊಟವನ್ನು 1 ಗಂಟೆಗೆ ಹಾಗೂ ರಾತ್ರಿ ಊಟವನ್ನು 7 ಗಂಟೆಗೆ ನಿಯಮಿತವಾಗಿ ನೀಡುವಂತೆ ಮತ್ತು ಪ್ರತಿ ವ್ಯಕ್ತಿಯ ಆಹಾರ ವೆಚ್ಚ 250 ರೂ.ಗಳಿಗೆ ಮೀರದಂತೆ ಕ್ರಮ ವಹಿಸುವಂತೆ ಸೂಚಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಮ್ಮ ಆದೇಶದಲ್ಲಿ ಪ್ರತಿ ನಿತ್ಯ ಆಹಾರ ವ್ಯವಸ್ಥೆಯನ್ನು ರೋಗಿಗಳಿಗೆ, ವೈದ್ಯರಿಗೆ, ಅಧಿಕಾರಿಗಳಿಗೆ ಮತ್ತು ಇತರರಿಗೆ ಒದಗಿಸಬೇಕು ಮತ್ತು ಆ ಮೊತ್ತವನ್ನು ಎಆರ್ಎಸ್ ನಿಧಿ ಅಥವಾ ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ ವಿಪತ್ತು ಪರಿಹಾರ ನಿಧಿಯಿಂದ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. ಸರ್ಕಾರ ತಜ್ಞರ ಜೊತೆ ಚರ್ಚಿಸಿ ಪ್ರತಿ ದಿನದ ಆಹಾರದ ಮೆನುವನ್ನು ಸಿದ್ಧಪಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಮೆನು ಪ್ರಕಾರವೇ ರೋಗಿಗಳಿಗೆ ಊಟ, ಉಪಹಾರ ನೀಡಲು ಸೂಚಿಸಲಾಗಿದೆ.
ಆಹಾರದ ಮೆನು
ಪ್ರತಿ ದಿನ ಬೆಳಗ್ಗೆ 7ಗಂಟೆಗೆ ಉಪಹಾರ.
ಬೆಳಗ್ಗೆ 10 ಗಂಟೆಗೆ ಹಣ್ಣು, ಗಂಜಿ ಅಥವಾ ಸೂಪ್.
ಮಧ್ಯಾಹ್ನ 1 ಗಂಟೆಗೆ ಊಟ ರೊಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು, ಮೊಟ್ಟೆ .
ಸಂಜೆ 5.30ಕ್ಕೆ ಲಘು ಉಪಹಾರ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್-3, ಪ್ರೊಟೀನ್ ಬಿಸ್ಕೆಟ್-2, ಫ್ರೆಶ್ ಡೇಟ್ಸ್-2, ಮ್ಯಾಂಗೋ ಬಾರ್(ವಿಟಮಿನ್-ಸಿ ಯುಕ್ತ).
ರಾತ್ರಿ 7ಕ್ಕೆ ಊಟ ರೊಟ್ಟಿ ಅಥವಾ ಚಪಾತಿ-2, ಪಲ್ಯ, ಅನ್ನ, ಬೇಳೆ ಸಾರು, ಮೊಸರು
ರಾತ್ರಿ 9ಕ್ಕೆ ಫ್ಲೇವರ್ಡ್ ಹಾಲು ನೀಡಲಾಗುತ್ತದೆ.