ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಾಂವಿಧಾನಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ವಿಧಾನಮಂಡಲ ವಿಶೇಷ ಅಧಿವೇಶನದ ಎರಡನೇ ದಿನದ ಕಲಾಪದ ವೇಳೆ, ರಾಜ್ಯಪಾಲರ ಭಾಷಣ ವಿಷಯವೇ ದೊಡ್ಡ ರಾಜಕೀಯ ಮತ್ತು ಸಂವಿಧಾನಿಕ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ಹಾಗೂ ಕೇರಳದಲ್ಲಿ ಈಗಾಗಲೇ ರಾಜ್ಯಪಾಲರು–ಸರ್ಕಾರಗಳ ನಡುವಿನ ಭಾಷಣ ವಿವಾದಗಳು ಗಮನ ಸೆಳೆದಿದ್ದರೆ, ಇದೀಗ ಅದೇ ರೀತಿಯ ಸಂಘರ್ಷ ಕರ್ನಾಟಕದಲ್ಲೂ ಮರುಕಳಿಸಿದೆ.
ವಿಶೇಷ ಅಧಿವೇಶನದ ಆರಂಭದಲ್ಲಿ ಸರ್ಕಾರದ ನೀತಿ–ಉದ್ದೇಶಗಳು ಮತ್ತು ಮುಂದಿನ ಕಾರ್ಯಸೂಚಿಯನ್ನು ರಾಜ್ಯದ ಜನತೆಗೆ ತಿಳಿಸಲು ರಾಜ್ಯಪಾಲರು ಭಾಷಣ ಮಾಡಬೇಕಿತ್ತು. ಆದರೆ ರಾಜ್ಯಪಾಲರಾದ ಗೆಹೋಟ್ ಅವರು ಸರ್ಕಾರ ನೀಡಿದ್ದ ಭಾಷಣ ಪ್ರತಿಯ ಸಂಪೂರ್ಣ ಪಠ್ಯವನ್ನು ಓದದೆ, ಕೇವಲ ಎರಡು ಸಾಲುಗಳನ್ನು ಮಾತ್ರ ಓದಿ ಭಾಷಣ ಮುಗಿಯಿತು ಎಂದು ಕುಳಿತುಕೊಂಡಿದ್ದಾರೆ. ಈ ನಡೆ ವಿಧಾನಸಭಾ ಕಲಾಪದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.
ರಾಜ್ಯ ಸರ್ಕಾರದ ಪಾಳಯ ಇದನ್ನು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದ್ದು, ಮಂತ್ರಿಗಳು ಹಾಗೂ ಆಡಳಿತ ಪಕ್ಷದ ಸದಸ್ಯರು ರಾಜ್ಯಪಾಲರ ವರ್ತನೆ ಸರ್ಕಾರದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಶಿಫಾರಸಿನಂತೆ ಸಂಪೂರ್ಣ ಭಾಷಣ ಓದುವುದು ರಾಜ್ಯಪಾಲರ ಸಂವಿಧಾನಿಕ ಕರ್ತವ್ಯ ಎಂಬುದು ಆಡಳಿತ ಪಕ್ಷದ ವಾದವಾಗಿದೆ.
ಇದರ ನಡುವೆ, ಪ್ರತಿಪಕ್ಷಗಳು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿದ್ದು, ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಮನ್ವಯದ ಕೊರತೆಯೇ ಈ ಗೊಂದಲಕ್ಕೆ ಕಾರಣ ಎಂದು ಆರೋಪಿಸಿದೆ. ಕೆಲ ನಾಯಕರು ರಾಜ್ಯಪಾಲರ ನಡೆಯನ್ನು ಸಮರ್ಥಿಸಿಕೊಂಡು, ಸರ್ಕಾರದ ಭಾಷಣ ವಿಷಯದಲ್ಲೇ ಅಸಮಾಧಾನ ಇರಬಹುದು ಎಂಬ ಸೂಚನೆ ನೀಡಿದ್ದಾರೆ.
ಈ ಭಾಷಣ ವಿವಾದವು ಎರಡನೇ ದಿನದ ಕಲಾಪದಲ್ಲೂ ಮುಂದುವರಿದು, ಸದನದಲ್ಲಿ ವಾಗ್ವಾದ, ಘೋಷಣೆಗಳು ಮತ್ತು ಆಕ್ರೋಶದ ದೃಶ್ಯಗಳು ಕಂಡುಬಂದಿವೆ. ರಾಜ್ಯಪಾಲರು–ಸರ್ಕಾರ ನಡುವಿನ ಈ ಸಂಘರ್ಷ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಬಿಸಿ ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.








